ಅತ್ತೆ ಮನೆ ಬಿಟ್ಟು ಬಂದಿದ್ದಕ್ಕೆ ಆಕೆಯನ್ನು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ತಂದೆ, ಸೋದರಸಂಬಂಧಿ..
Saturday, July 3, 2021
ಭೋಪಾಲ್: ಅತ್ತೆ ಮನೆಯನ್ನು ಬಿಟ್ಟು ಮನೆಗೆ ಬಂದಿದ್ದಕ್ಕೆ ಕೋಪಗೊಂಡು 19 ವರ್ಷದ ಯುವತಿಯೊಬ್ಬಳನ್ನು ಆಕೆಯ ತಂದೆ ಮತ್ತು ಸೋದರಸಂಬಂಧಿಗಳು ಸಾರ್ವಜನಿಕರ ಎದುರಲ್ಲೇ ಥಳಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಕೂದಲು ಹಿಡಿದೆಳೆದು ಮರಕ್ಕೆ ಕಟ್ಟಿ 19 ವರ್ಷದ ಯುವತಿಯೊಬ್ಬಳನ್ನು ಆಕೆಯ ತಂದೆ ಮತ್ತು ಸೋದರಸಂಬಂಧಿಗಳು ಸಾರ್ವಜನಿಕರ ಎದುರಲ್ಲೇ ಥಳಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮನಸ್ಸು ಕದಡುವಂತಿದೆ.
ಸಂತ್ರಸ್ತ ಯುವತಿ ಮೂರು ತಿಂಗಳ ಹಿಂದಷ್ಟೇ ಮದುವೆ ಆಗಿದ್ದಳು. ಅತ್ತೆ ಮನೆಯನ್ನು ಬಿಟ್ಟು ಮನೆಗೆ ಬಂದಿದ್ದಕ್ಕೆ ಕೋಪಗೊಂಡಿದ್ದ ಕುಟುಂಬಸ್ಥರು ಆಕೆಯನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವತಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 400 ಕಿಲೋಮೀಟರ್ ದೂರದಲ್ಲಿರುವ ಅಲಿರಾಜ್‌ಪುರದ ತನ್ನ ಮಾವನ ಮನೆಗೆ ಹೋಗಿದ್ದಳು. ಈ ವೇಳೆ ಆಕೆಯನ್ನು ಅಲ್ಲಿಂದ ಹೊರಗೆ ಎಳೆದು ಚಿತ್ರಹಿಂಸೆ ನೀಡಲಾಗಿದೆ.ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರು ಯುವತಿಯ ಹೇಳಿಕೆಯನ್ನು ದಾಖಲಿಸಿ ಆಕೆಯ ತಂದೆ ಮತ್ತು ಸೋದರಸಂಬಂಧಿಗಳನ್ನು ಬಂಧಿಸಿದ್ದಾರೆ.