
ಗೂಗಲ್ ನಲ್ಲಿ ಪುರುಷರು ಈ ವಿಚಾರಗಳ ಬಗ್ಗೆ ಅತೀ ಹೆಚ್ಚು ಜಾಲಾಡುತ್ತಾರುತ್ತಾರಂತೆ!
Sunday, July 4, 2021
ನವದೆಹಲಿ: ಇಂದು ಯಾವುದೇ ವಿಚಾರದ ಬಗ್ಗೆ ಸಂಶಯ ಕಂಡು ಬಂದರೂ ಗೂಗಲ್‌ನಲ್ಲಿ ಸರ್ಚ್ ಮಾಡುವುದು ಸರ್ವೇ ಸಾಮಾನ್ಯ. ವಿವಿಧ ವಿಚಾರಗಳ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಗಳು ನಿತ್ಯವೂ ನಡೆಯುತ್ತಲೇ ಇರುತ್ತವೆ. ಫ್ರಾಮರ್ಸ್ ಡಾಟ್ ಕಾಮ್ ಸಮೀಕ್ಷೆಯೊಂದು ಈ ವರ್ಷ ಪುರುಷರು ಅತಿ ಹೆಚ್ಚಾಗಿ ಗೂಗಲ್‌ನಲ್ಲಿ ಸರ್ಚ್ ಮಾಡಿರುವ ವಿಷಯ ಯಾವುದು ಎಂಬುದನ್ನು ಬಹಿರಂಗಗೊಳಿಸಿದೆ. ಈ ಐದು ವಿಚಾರಗಳ ಬಗ್ಗೆ ಪುರುಷರು ಅತೀ ಹೆಚ್ಚಾಗಿ ಗೂಗಲ್ ಜಾಲಾಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದೆ.
ಅತೀ ಹೆಚ್ಚು ಪುರುಷರು ನಪುಂಸಕತೆಯ ಬಗ್ಗೆ ಸರ್ಚ್ ಮಾಡಿದ್ದಾರೆ ಎಂದು ಈ ವರದಿ ತಿಳಿಸಿದೆ. ಹೆಚ್ಚಿನ ಪುರುಷರಿಗೆ ತಾವು ನಪುಂಸಕರಾಗಿದ್ದೇವೆಯೇ ಎಂಬ ಭಯ ಕಾಡಿದೆಯಂತೆ. ಅದೇ ಕಾರಣಕ್ಕೆ ನಪುಂಸಕತೆಯ ಲಕ್ಷಣಗಳೇನು ಎಂಬುದರ ಬಗ್ಗೆ ಹೆಚ್ಚಿನ ಪುರುಷರು ಹುಡುಕಾಡುತ್ತಿರುತ್ತಾರೆ ಎಂದಿದೆ ವರದಿ. ಪುರುಷರು ತಮ್ಮ ಲೈಂಗಿಕತೆಯ ಬಗ್ಗೆ ಬಹಳ ಕಾಳಜಿ ವಹಿಸಿದ್ದು, ಸರಿ ಸುಮಾರು 68,600 ಜನರು ನಪುಂಸಕತೆಯ ಲಕ್ಷಣ ಹೊಂದಿದ್ದೇವೆಯೇ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಿರುವುದಾಗಿ ವರದಿ ಹೇಳಿದೆ. ಸೌಂದರ್ಯ ಎಂದರೆ ಮಹಿಳೆಯರಷ್ಟೇ ಕಣ್ಮುಂದೆ ಬರುತ್ತಾರೆ. ಆದರೆ ಪುರುಷರು ಸೌಂದರ್ಯದ ಕುರಿತ ವಿಷಯ ತಿಳಿದುಕೊಳ್ಳುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ಶೇವಿಂಗ್ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಪುರುಷರು ಕುತೂಹಲ ತೋರಿದ್ದಾರೆ. ಶೇವಿಂಗ್ ನಂತರ ಹೆಚ್ಚಿನ ಕೂದಲು ಬೆಳೆಯುವ ಸಾಧ್ಯತೆಯಿದೆಯೇ ಎಂಬುದನ್ನು ಸರ್ಚ್ ಮಾಡಿದ್ದಾರೆ. 68,400 ಜನರು ಈ ಬಗ್ಗೆ ಹುಡುಕಾಟ ನಡೆಸಿದ್ದಾರೆ.
ಅನೇಕರು ತಲೆಗೂದಲಿನ ಸಮಸ್ಯೆ ಬಗ್ಗೆ ಜಾಲಾಡಿದ್ದಾರೆ. ಅದೂ ಜುಟ್ಟಿನ ಬಗ್ಗೆ ಇವರಿಗೆ ಅತಿ ಹೆಚ್ಚು ಪ್ರೀತಿಯಂತೆ. ಅದೇ ಕಾರಣಕ್ಕಾಗಿ ಜುಟ್ಟು ಕಟ್ಟಿದಲ್ಲಿ ಅಥವಾ ಟೋಪಿ ಹಾಕಿದ್ರೆ ಕೂದಲು ಉದುರುತ್ತಾ ಎಂಬ ಪ್ರಶ್ನೆಗೂ ಉತ್ತರ ಹುಡುಕುವ ಪ್ರಯತ್ನ ನಡೆದಿದೆ. 52,100 ಜನರು ಗೂಗಲ್‌ನಲ್ಲಿ ಈ ವಿಷಯದ ಕುರಿತು ಹುಡುಕಾಟ ನಡೆಸಿದ್ದಾರೆ ಎಂದಿದೆ ಸಮೀಕ್ಷೆ. ಅದೇ ರೀತಿ ಸ್ತನ ಕ್ಯಾನ್ಸರ್ ಕುರಿತು ಮಹಿಳೆಯರಂತೆ ಪುರುಷರಿಗೆ ಭಯವಿದೆಯಂತೆ. ಇದೇ ಕಾರಣಕ್ಕೆ 61,200 ಜನರು ಗೂಗಲ್‌ನಲ್ಲಿ ಈ ಬಗ್ಗೆ ಹುಡುಕಿದ್ದಾರೆ. 60 ವರ್ಷದ ನಂತರ ಪುರುಷರು ಈ ಸಮಸ್ಯೆಯಿಂದ ಬಳಲುವುದು ಹೆಚ್ಚು. ಆದ್ದರಿಂದ ಆರಂಭಿಕ ರೋಗ ಲಕ್ಷಣವನ್ನು ತಿಳಿದುಕೊಳ್ಳಲು ಗೂಗಲ್ ಮೊರೆ ಹೋಗಿದ್ದಾರೆ. ಇನ್ನು ಫಿಟ್‌ನೆಸ್‌ನಲ್ಲಿಯೂ ಪುರುಷರು ಹಿಂದೆ ಬಿದ್ದಿಲ್ಲ. ಅವರು ಹೆಚ್ಚಾಗಿ ಹುಡುಕುವುದು, ವ್ಯಾಯಾಮ ಮುಗಿದ ಕೂಡಲೇ ಪ್ರೋಟೀನ್ ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ತಿಳಿಯಲು ಬಯಸ್ತಾರೆ. ಹಾಗೆ ಯಾವ ಪ್ರೋಟೀನ್ ಬೆಸ್ಟ್ ಎಂಬುದನ್ನೂ ತಿಳಿಯುವ ಪ್ರಯತ್ನ ನಡೆಸಿದ್ದಾರೆ ಎಂದು ಈ ವರದಿ ಬಹಿರಂಗಗೊಳಿಸಿದೆ.