ಮನೆಯಲ್ಲಿದ್ದ ತಂಗಿಯ ಒಡವೆಯೊಂದಿಗೆ ಅಕ್ಕ ಪರಾರಿ: ತಂದೆಯಿಂದ ದೂರು ದಾಖಲು
Friday, July 30, 2021
ಮಂಗಳೂರು: ಮನೆಯ ಕಪಾಟಿನಲ್ಲಿದ್ದ ತಂಗಿಯ ಒಡವೆಗಳನ್ನು ಕದ್ದು ಅಕ್ಕ ಪರಾರಿಯಾಗಿದ್ದು, ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸುರತ್ಕಲ್ ಠಾಣಾ ವ್ಯಾಪ್ತಿಯ ಇಬ್ರಾಹೀಂ ಎಂಬವರ ಪುತ್ರಿ ರಿಜ್ವಾನಾ ನಗರದ ಚೊಕ್ಕಬೆಟ್ಟುವಿನ ಜಾಮೀಯಾ ಇಂಗ್ಲೀಷ್ ಮೀಡಿಯಂ ಶಾಲೆಯಲ್ಯ ಶಿಕ್ಷಕಿಯಾಗಿದ್ದಳು. ವಿವಾಹಿತೆಯಾಗಿದ್ದ ಈಕೆ ಗಂಡ ದುಬೈನಲ್ಲಿರುವುದರಿಂದ ತನ್ನ ತಂದೆಯ ಮನೆಯಲ್ಲಿಯೇ ಉಳಿದುಕೊಂಡಿದ್ದಳು. ರಿಜ್ವಾನಾ ತಂಗಿ ರಾಝ್ವಿನಾಳಿಗೆ ಇತ್ತೀಚೆಗೆ ವಿವಾಹವಾಗಿತ್ತು. ಆದರೆ ಆಕೆಯ ಒಡವೆಗಳು ತಂದೆಯ ಮನೆಯಲ್ಲಿಯೇ ಇತ್ತು. ಒಡವೆಗಳಿದ್ದ ಕಪಾಟಿನ ಕೀ ಹಿರಿಯ ಮಗಳಾದ ರಿಜ್ವಾನಾ ಬಳಿ ಇದ್ದು, ಹಣದ ಅವಶ್ಯಕತೆ ಇರುವುದರಿಂದ ಜುಲೈ 26ರಂದು ಬೆಳಗ್ಗೆ ಒಡವೆಗಳನ್ನು ಅಡವಿರಿಸಲು ಕಪಾಟು ಕೀಯನ್ನು ಇಬ್ರಾಹಿಂ ಅವರು ಕೇಳಿದ್ದಾರೆ ಆದರೆ ರಿಜ್ವಾನಾ ಕೀ ಕೊಡಲು ನಿರಾಕರಿಸಿದ್ದಳೆಂದು ದೂರಿನಲ್ಲಿ ತಿಳಿಸಲಾಗಿದೆ.
ಅದೇ ದಿನ ಬೆಳಗ್ಗೆ ರಿಜ್ವಾನಾ ತಾನು ಶಿಕ್ಷಕಿಯಾಗಿದ್ದ ಚೊಕ್ಕಬೆಟ್ಟುವಿನ ಜಾಮೀಯಾ ಇಂಗ್ಲೀಷ್ ಮೀಡಿಯಂ ಶಾಲೆಗೆ ಎಂದು ಹೇಳಿ ಹೋದವಳು ವಾಪಾಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದಳು. ಆಕೆಯ ಮೊಬೈಲ್ ಪೋನ್ ಕೂಡಾ ಸ್ವಿಚ್ ಆಫ್ ಆಗಿತ್ತು. ಆದರೆ ಮರುದಿನ ಕಪಾಟಿನ ಬಾಗಿಲು ಒಡೆದಾಗ ಒಡವೆಗಳು ನಾಪತ್ತೆಯಾಗಿತ್ತು. ರಿಜ್ವಾನಾಳಿಗೆ ಕೃಷ್ಣಾಪುರದ ಬಶೀರ್ ಎಂಬಾತನೊಂದಿಗೆ ಪ್ರೀತಿಯಿದ್ದು, ಆತನೊಂದಿಗೆ ಒಡವೆ ಜೊತೆಯಲ್ಲಿ ಪರಾರಿಯಾಗಿದ್ದಾಳೆಂದು ಆಕೆಯ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.