
ತಮ್ಮ ಮನೆಗಳನ್ನು ಮಾರುತ್ತಿರುವ ಪ್ರಿಯಾಂಕಾ ಚೋಪ್ರಾ ಸಂಪೂರ್ಣ ವಿದೇಶದಲ್ಲಿಯೇ ನೆಲೆಯಾಗಲಿದ್ದಾರೆಯೇ?
ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ಅವರು ಮುಂಬೈ ಬಿಟ್ಟು ವಿದೇಶದಲ್ಲಿಯೇ ಸೆಟ್ಲ್ ಆಗುವ ಬಗ್ಗೆ ಗಾಳಿ ಸುದ್ದಿಯೊಂದು ಹರಡುತ್ತಿದೆ. ಇದಕ್ಕೆ ಕಾರಣವೂ ಇದ್ದು, ಇತ್ತೀಚೆಗೆ ಪ್ರಿಯಾಂಕಾ ಮುಂಬೈನ ತಮ್ಮ ಎರಡು ಮನೆಗಳನ್ನು ಮಾರಿದ್ದಾರೆ. ಜತೆಗೆ ಒಂದು ಆಫೀಸ್ ಬಾಡಿಗೆಗೆ ಕೊಟ್ಟಿದ್ದಾರೆ. ಕಳೆದ ವರ್ಷವೂ ಮನೆಯನ್ನು ಅವರು ಮಾರಿದ್ದರು. ಇವೆಲ್ಲವನ್ನೂ ನೋಡುತ್ತಿದ್ದರೆ, ಪ್ರಿಯಾಂಕಾ ಮುಂಬೈ ಬಿಟ್ಟು ವಿದೇಶದಲ್ಲೇ ನೆಲೆಸುವುದಕ್ಕೆ ಸಜ್ಜಾಗುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಎಲ್ಲರನ್ನೂ ಕಾಡುತ್ತಿದೆ.
ಮೂರು ತಿಂಗಳ ಹಿಂದೆ ಪ್ರಿಯಾಂಕಾ ಮುಂಬೈನ ಅಂಧೇರಿ ವೆಸ್ಟ್ನಲ್ಲಿರುವ ರಾಜ್ ಕ್ಲಾಸಿಕ್ ಎಂಬ ಅಪಾರ್ಟ್ಮೆಂಟ್ನಲ್ಲಿದ್ದ ಎರಡು ಮನೆಗಳನ್ನು ಮಾರಿದ್ದರು. ಇದಕ್ಕೆ ಅವರಿಗೆ ಏಳು ಕೋಟಿ ರೂ. ದೊರೆತಿದೆ. 900 ಮತ್ತು 1300 ಚದರಡಿ ವಿಸ್ತೀರ್ಣದ ಈ ಮನೆಗಳನ್ನು ಪ್ರಿಯಾಂಕಾ ಯಾವಾಗ ಖರೀದಿಸಿದ್ದರೋ ಗೊತ್ತಿಲ್ಲ? ಒಟ್ಟಾರೆ ಎರಡೂ ಮನೆಗಳನ್ನು ಅವರು ಮಾರಿದ್ದಾರೆ. ಮನೆ ಮಾರಾಟ ಮಾಡುವುದರ ಜತೆಗೆ ಒಂದು ಕಚೇರಿಯನ್ನೂ ಎರಡು ಲಕ್ಷ ರೂ. ಬಾಡಿಗೆಗೆ ಬಿಟ್ಟಿದ್ದಾರೆ.
ಹೀಗೆ ಮುಂಬೈನಲ್ಲಿರುವ ಒಂದೊಂದೇ ಆಸ್ತಿಯನ್ನು ಮಾರುತ್ತಿರುವುದರಿಂದ ಸಹಜವಾಗಿ ಪ್ರಿಯಾಂಕಾ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದು, ಅವರು ಸಂಪೂರ್ಣ ವಿದೇಶದಲ್ಲಿಯೇ ನೆಲೆಯಾಗುತ್ತಾರೆಯೇ ಎಂಬ ಅನುಮಾನಗಳು ಮೂಡುತ್ತಿವೆ.