
ನಕಲಿ ಕೋರ್ಟ್ ಆದೇಶದಿಂದ ಬಡ್ತಿ ಪಡೆಯಲು ಹವಣಿಸಿ ಕಂಬಿ ಎಣಿಸುತ್ತಿರುವ ಐಎಎಸ್ ಅಧಿಕಾರಿ!
Sunday, July 11, 2021
ಇಂದೋರ್: ತಮ್ಮ ಮೇಲಿನ ಕೋಟ್ ಕೇಸ್ ವಜಾಗಿದೆ ಎಂದು ಎರಡು ನಕಲಿ ಕೋರ್ಟ್ ಆದೇಶವನ್ನು ನೀಡಿರುವ ಐಎಎಸ್ ಅಧಿಕಾರಿಯೋರ್ವನು ಇದೀಗ ಪೊಲೀಸ್ ಅತಿಥಿಯಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಭೂಪಾಲ್‍ನ ನಗರಾಡಳಿತ ಮತ್ತು ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಆಯುಕ್ತ ಸಂತೋಷ್ ವರ್ಮಾ ಈ ಕೃತ್ಯ ಎಸಗಿರುವವನು. ಮಹಿಳೆಯೋರ್ವರ ಮೇಲೆ ದೌರ್ಜನ್ಯ ನಡೆಸಿರುವ ಆರೋಪದಡಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೋರ್ಟ್‌ನಲ್ಲಿ ಈ ಪ್ರಕರಣ ಇನ್ನೂ ಇತ್ಯರ್ಥವಾಗಿರಲಿಲ್ಲ. ವಿಚಾರಣೆ ಬಾಕಿಯಿರುವ ಹಿನ್ನೆಲೆಯಲ್ಲಿ ಬಡ್ತಿಯೂ ಸಿಗುತ್ತಿರಲಿಲ್ಲ.
ಆದರೆ ಸಂತೋಷ್ ವರ್ಮಾ ಏನಾದರೂ ಮಾಡಿ ಬಡ್ತಿ ಪಡೆಯಬೇಕೆಂದು ಆಲೋಚಿಸಿ ಎರಡು ನಕಲಿ ಆದೇಶ ತಯಾರು ಮಾಡಿದ್ದಾನೆ. ಅದರಲ್ಲಿ ಒಂದು ಆದೇಶದಲ್ಲಿ ‘ಅಧಿಕಾರಿಯ ಮೇಲಿದ್ದ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸಲಾಗಿದೆ’ ಎಂದು ಕೋರ್ಟ್ ತೀರ್ಪು ನೀಡಿದಂತೆ ಉಲ್ಲೇಖವಾಗಿತ್ತು. ಇನ್ನೊಂದರಲ್ಲಿ ‘ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಅಧಿಕಾರಿ ನಡುವೆ ಸಂಧಾನ ಏರ್ಪಟ್ಟಿದ್ದು, ಪ್ರಕರಣ ಇತ್ಯರ್ಥಗೊಂಡಿದೆ’ ಎಂಬ ಉಲ್ಲೇಖವಿತ್ತು. ಆದರೆ ಈತ ಮಾಡಿರುವ ಒಂದು ಎಡವಟ್ಟಿನಿಂದ ಈತನ ಲೆಕ್ಕಾಚಾರವರಲ್ಲಾ ತಲೆಕೆಳಗಾಗಿದೆ.
ಅದೇನೆಂದರೆ ಈತ ನೀಡಿರುವ ನಕಲಿ ಆದೇಶದ ಪ್ರತಿಯಲ್ಲಿ ಕೋರ್ಟ್ 2020ರ ಅಕ್ಟೋಬರ್ 6ರಂದು ಆದೇಶ ನೀಡಿದೆ ಉಲ್ಲೇಖವಾಗಿತ್ತು. ಆದರೆ ಆದೇಶದ ಪ್ರತಿ ನೋಡಿದ ಮೇಲಧಿಕಾರಿಗಳಿಗೆ ಸಂದೇಹ ಬಂದಿತ್ತು. ಏಕೆಂದರೆ ಆ ದಿನ ಕೋರ್ಟ್‌ಗೆ ರಜವಿತ್ತು. ನಂತರ ಈ ಬಗ್ಗೆ ದೂರು ದಾಖಲಾದಾಗ ಜಿಲ್ಲಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಪ್ರಕರಣವನ್ನು ಪರಿಶೀಲಿಸಿ ಇದು ನಕಲಿ ಆದೇಶವೆಂದು ಹೇಳಿದರು.
ಈ ಬಗ್ಗೆ ವಿಚಾರಣೆ ನಡೆಸಿದಾಗ ಐಎಎಸ್ ಅಧಿಕಾರಿಯ ಮೋಸದ ಕೃತ್ಯ ಬೆಳಕಿಗೆ ಬಂದಿದೆ. ಈ ಮೂಲಕ ಆತನ ಮೇಲೆ ಪೊಲೀಸರು ಮತ್ತೊಂದು ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಿದ್ದಾರೆ.