
ಬ್ಯಾಂಕ್ ಲೋನ್ ವಿಚಾರದಲ್ಲಿ 'ಡಿ ಬಾಸ್' ಗೇ ವಂಚಿಸಲು ಹೊರಟ ಮಹಿಳೆ ಅರೆಸ್ಟ್: ಪ್ರಕರಣದ ಹಿಂದೆ ನಿರ್ಮಾಪಕನ ಹೆಸರು!
Sunday, July 11, 2021
ಮೈಸೂರು: ಬ್ಯಾಂಕ್ ಲೋನ್ ವಿಚಾರದಲ್ಲಿ ನಟ ದರ್ಶನ್ ಹೆಸರಿನಲ್ಲಿ ವಂಚಿಸಲು ಹೊರಟ ಮಹಿಳೆಯ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ.
ಬ್ಯಾಂಕ್ ಲೋನ್ ವಿಚಾರವಾಗಿ ಅರುಣ ಕುಮಾರಿ ಎಂಬ ಮಹಿಳೆ ನಟ ದರ್ಶನ್ ಬಳಿ ಬಂದಿದ್ದು, ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ ಗೌಡ ಜತೆಗಿದ್ದರು. ತಮ್ಮನ್ನು ತಾವು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ ಅರುಣಾ ಕುಮಾರಿ, ಮೈಸೂರಿನ ತಮ್ಮ ಸ್ನೇಹಿತರು ನಿಮ್ಮ ಶ್ಯೂರಿಟಿಯಲ್ಲಿ 25 ಕೋಟಿ ರೂ. ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ ಎಂದಿದ್ದರು. ಈ ವಿಚಾರದಲ್ಲಿ ಅನುಮಾನಗೊಂಡ ದರ್ಶನ್, ಪರಿಶೀಲನೆ ನಡೆಸಿದ್ದಾರೆ. ಆದರೆ ಯಾರೂ ಬ್ಯಾಂಕ್ ಲೋನ್‌ಗೆ ಅರ್ಜಿ ಹಾಕಿಲ್ಲ ಎಂದು ತಿಳಿದುಬಂದಿದೆ.
ತಕ್ಷಣ ಅವರು ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತಕ್ಷಣ ಪೊಲೀಸರು ಅರುಣಾ ಕುಮಾರಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಮಹಿಳೆ, ನಿರ್ಮಾಪಕ ಉಮಾಪತಿ ಹೇಳಿರುವ ಕಾರಣ ನಟ ದರ್ಶನ್ ಬಳಿ ಬಂದಿರುವುದಾಗಿ ಈ ಹೇಳಿಕೆ ನೀಡಿದ್ದಾರೆ. ಈ ರೀತಿ ಉಮಾಪತಿ ಯಾವ ಕಾರಣಕ್ಕೆ ಮಾಡಿದ್ದಾರೆನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಇನ್ನಷ್ಟೇ ನಿಜ ವಿಚಾರ ಹೊರಬರಬೇಕಿದೆ. ಈಗಾಗಲೇ ಉಮಾಪತಿ ಹಾಗೂ ಶ್ರೀನಿವಾಸ್ ಗೌಡರನ್ನೂ ಕರೆಸಿರುವ ಪೊಲೀಸರು ನಕಲಿ ಮ್ಯಾನೇಜರ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಡಿಸಿಪಿ ಪ್ರದೀಪ್ ಗುಂಟಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿಚಾರವಾಗಿ ದರ್ಶನ್ ಎಸಿಪಿ ಕಚೇರಿಗೆ ಹಾಜರಾಗಿರುವ ದರ್ಶನ್ ಅವರು, ಪ್ರಕರಣದಲ್ಲಿ ನನ್ನ ಹೆಸರು ಬಳಕೆಯಾಗಿದೆ. ಆದ್ದರಿಂದಲೇ ಪೊಲೀಸ್ ಠಾಣೆಗೆ ಬಂದಿದ್ದೇನೆ. ಈ ವಿಷಯದಲ್ಲಿ ರೆಕ್ಕೆ ಪುಕ್ಕ ಬೆಳೆಸೋದು ಬೇಡ. ತಪ್ಪು ಮಾಡಿದ್ದು ಯಾರೆಂದು ಗೊತ್ತಾದಲ್ಲಿ, ರೆಕ್ಕೆ ಪುಕ್ಕ ಅಲ್ಲ, ನಾನು ತಲೆಯನ್ನೇ ಕಡಿಯೋನು ಅಂತ ನಿಮಗೆಲ್ಲಾ ಗೊತ್ತು ಎಂದು ಕಿಡಿ ಕಾರಿದ್ದಾರೆ.