ಕೊರೊನಾ ಸೋಂಕಿದ್ದರೂ, ಹೆಣ್ಣಿನ ವೇಷದಲ್ಲಿ ವಿಮಾನ ಪ್ರಯಾಣ: ಪೊಲೀಸ್ ಅತಿಥಿಯಾದ ವ್ಯಕ್ತಿ!
Saturday, July 24, 2021
ಜಕಾರ್ತ: ಕೊರೊನಾ ಸೋಂಕಿತರಿಗೆ ವಿಮಾನ ಯಾನಕ್ಕೆ ಅನುಮತಿ ಇರದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನು ತನ್ನ ಪತ್ನಿ ವೇಷ ಧರಿಸಿಕೊಂಡು ವಿಮಾನವೇರಿದ್ದು, ಇನ್ನೇನು ತಾನು ಸೇರಬೇಕಿದ್ದ ಊರಿಗೆ ತಲುಪುವವನಿದ್ದ. ಆದರೆ ಆತ ಮಾಡಿರುವ ಎಡವಟ್ಟಿನಿಂದ ವಿಮಾನ ಲ್ಯಾಂಡ್ ಆದ ಕೂಡಲೇ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಇಂಥದ್ದೊಂದು ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಪೂರ್ತಿ ಬುರ್ಖಾ ಧರಿಸಿರುವ ಈ ವ್ಯಕ್ತಿಗೆ ಜಕಾರ್ತಾದಿಂದ ಟೆರ್ನೇಟ್ಗೆ ಪ್ರಯಾಣಿಸುವ ಅನಿವಾರ್ಯವಿತ್ತು. ಆದರೆ ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ, ವಿಮಾನ ಪ್ರಯಾಣಕ್ಕೆ ಅನುಮತಿ ಇರಲಿಲ್ಲ. ಆದ್ದರಿಂದ ಆತ ಒಂದು ಪ್ಲ್ಯಾನ್ ಮಾಡಿದ್ದಾನೆ. ಅದೇನೆಂದರೆ ಬುರ್ಖಾ ಧರಿಸಿ ಪತ್ನಿಯ ಗುರುತಿನ ಚೀಟಿ ಹಾಗೂ ಆಕೆಯ ಕೋವಿಡ್ ನೆಗೆಟಿವ್ ರಿಪೋರ್ಟ್ ಹಿಡಿದು ಹೋಗಿದ್ದಾನೆ. ಚೆಕಿಂಗ್ ಪಾಯಿಂಟ್ನಲ್ಲಿ ಅಧಿಕಾರಿಗಳು ಕೂಡ ಆತ ಹೆಣ್ಣು ಎಂದುಕೊಂಡು ಮುಂದಕ್ಕೆ ಬಿಟ್ಟಿದ್ದಾರೆ. ವಿಮಾನವನ್ನೂ ನಿಶ್ಚಿಂತೆಯಿಂದ ಏರಿದ್ದಾನೆ. ಇನ್ನೇನು ವಿಮಾನ ಟೆರ್ನೇಟ್ಗೆ ಸೇರಲಿದೆ ಎಂದಾಗ ಬಾತ್ರೂಂಗೆ ಹೋಗಿ ವೇಷ ಬದಲಿಸಿ ಪುರುಷನಂತೆ ಹೊರಬಂದಿದ್ದಾನೆ.
ಇದನ್ನು ವಿಮಾನ ಸಿಬ್ಬಂದಿಯೋರ್ವರು ನೋಡಿ, ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಆತ ವಿಮಾನದಿಂದ ಇಳಿಯುತ್ತಿದ್ದಂತೆಯೇ ಬಂಧಿಸಿದ್ದಾರೆ. ಬಳಿಕ ಕೊರೊನಾ ತಪಾಸಣೆ ನಡೆಸಿದಾಗ, ಪಾಸಿಟಿವ್ ಬಂದಿದೆ ಸದ್ಯ ಆತನನ್ನು ಕ್ವಾರಂಟೈನ್ ಮಾಡಲಾಗಿದೆ.