
ಒಳಜಗಳದಿಂದ 'ಅಸ್ಸಾಂ ವೀರಪ್ಪನ್' ಯುಪಿಆರ್ ಎಫ್ ಸದಸ್ಯರಿಂದಲೇ ಹತ್ಯೆ
ಗುವಾಹಟಿ: ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ (ಯುಪಿಆರ್ ಎಫ್) ಸಂಘಟನೆಯ ಒಳಜಗಳದ ಪರಿಣಾಮ ಯುಪಿಆರ್ ಎಫ್ ನ ಸ್ವಯಂ ಘೋಷಿತ ಕಮಾಂಡರ್, ಅಸ್ಸಾಂನ ವೀರಪ್ಪನ್ ನನ್ನು ಆ ಗುಂಪಿನ ಸದಸ್ಯರೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಅಸ್ಸಾಂನ ಕಾರ್ಬಿ ಅಂಗ್ಲಾಂಗ್ ಜಿಲ್ಲೆಯ ದಕ್ಷಿಣದ ಬೆಟ್ಟ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
'ಅಸ್ಸಾಂನ ವೀರಪ್ಪನ್' ಎಂದೇ ಕುಖ್ಯಾತಿ ಹೊಂದಿದ್ದ ಮಂಗಿನ್ ಖಲ್ ಹೌ ಬೆಲೆ ಬಾಳುವ ಮರಗಳನ್ನು ಕಡಿದು ಕಳ್ಳಸಾಗಾಟ ಮಾಡುವುದರಲ್ಲಿ ಶಾಮೀಲಾಗಿದ್ದ. ಈತ ಯುಪಿಆರ್ ಎಫ್ ಸಂಘಟನೆಯ ಏಕೈಕ ಹಿರಿಯ ಸದಸ್ಯನಾಗಿದ್ದ. ಕಳೆದ ಒಂದು ವರ್ಷದಲ್ಲಿ ಪೊಲೀಸರ ಎನ್ ಕೌಂಟರ್ ಗೆ ಯುಪಿಆರ್ ಎಫ್ ನ ಹಲವು ಮಂದಿ ಸಾವನ್ನಪ್ಪಿದ್ದರು. ಕೆಲವರು ಶರಣಾಗಿದ್ದರು ಎಂದು ತಿಳಿದು ಬಂದಿದೆ.
ನಾಗಲ್ಯಾಂಡ್ ನ ವಾಣಿಜ್ಯ ಕೇಂದ್ರ ದಿಮಾಪುರ್ ನಿಂದ ಸುಮಾರು 15 ಕಿ.ಮೀ. ದೂರದ ಹಾಗೂ ಅಂಗ್ಲಾಂಗ್ ಜಿಲ್ಲಾ ಕೇಂದ್ರ ದಿಫುವಿನಿಂದ 56 ಕಿ.ಮೀ. ದೂರದಲ್ಲಿರುವ ಬೊಕಾಜನ್ ಪಟ್ಟಣದ ಬೆಟ್ಟ ಪ್ರದೇಶವಾದ ಖೆಂಗ್ ಪಿಬುಂಗ್ ನಲ್ಲಿ ಭಾನುವಾರ ಮಧ್ಯರಾತ್ರಿ ಇವರ ತಂಡದೊಳಗೆ ಒಳಜಗಳ ನಡೆದಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.