
ಪತಿಯಿಂದ ವರದಕ್ಷಿಣೆ ಕಿರುಕುಳ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ....
Sunday, July 4, 2021
ಬೆಂಗಳೂರು : ಮಾರತಹಳ್ಳಿ ನಿವಾಸಿ 28 ವರ್ಷದ ಮಹಿಳೆ ಪತಿಯ ಕಿರುಕುಳದಿಂದ ಬೇಸತ್ತು ನ್ಯಾಯಕ್ಕಾಗಿ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಠಾಣೆಯ ಮೊರೆ ಹೋಗಿದ್ದಾಳೆ. ಪತಿ ಸೇರಿ ನಾಲ್ವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
2020 ನವೆಂಬರ್‌ನಲ್ಲಿ ಬಾಲಾಜಿ ಎಂಬುವವರನ್ನು ಮಹಿಳೆ ಮದುವೆಯಾಗಿದ್ದರು. ಮದುವೆಯ ಸಂದರ್ಭದಲ್ಲಿ ಮಹಿಳೆಯ ಪಾಲಕರು 2 ಕೆಜಿ ಚಿನ್ನಾಭರಣ, 5 ಕೆಜಿ ಬೆಳ್ಳಿ, ಕೈ ತುಂಬ ಹಣ ಕೊಟ್ಟು, 20 ಲಕ್ಷ ರೂ. ಖರ್ಚು ಮಾಡಿ ಭರ್ಜರಿ ವಿವಾಹ ಮಾಡಿದ್ದರು. ಆದರೆ ಯುವತಿ ವಿವಾಹವಾದ 1 ತಿಂಗಳಲ್ಲೇ ಪತಿ ಮತ್ತೆ 1 ಕೋಟಿ ರೂ. ವರದಕ್ಷಿಣೆಗೆ ಬೇಡಿಕೆಯಿಟ್ಟು, ಪತ್ನಿಗೆ ಕಿರುಕುಳ ಕೊಡಲು ಆರಂಭಿಸಿದ್ದ. ಮಹಿಳೆಯ ಪಾಲಕರು ಸಾಲ ಮಾಡಿ 80 ಲಕ್ಷ ರೂ. ಕೊಟ್ಟಿದ್ದರು. ಮನೆ ಕಟ್ಟಲು ಬಾಕಿ 20 ಲಕ್ಷ ರೂ.ಗಳನ್ನು ತರುವಂತೆ ಪತಿ ಆಗಾಗ ಪೀಡಿಸುತ್ತಿದ್ದ. ಇದಕ್ಕೆ ಪತ್ನಿ ನಿರಾಕರಿಸಿದಾಗ ಹಲ್ಲೆ ನಡೆಸಿ, ದೈಹಿಕ ಕಿರುಕುಳ ಕೊಟ್ಟು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ದೂರಿನಲ್ಲಿ ಹೇಳಲಾಗಿದೆ.
ಪತಿಯ ವರ್ತನೆಯಿಂದ ನೊಂದ ಪತ್ನಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಬಾಲಾಜಿಗೆ ನೋಟಿಸ್ ನೀಡಿರುವ ಪೊಲೀಸರು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.