5ಜಿ ಫೀಚರ್‌ಗಾಗಿ ಹೊಸ ಫೋನ್ ಕೊಳ್ಳಲೇಬೇಕೇ? ಇಲ್ಲಿದೆ ಮಾಹಿತಿ
Saturday, July 24, 2021
ಮುಂಬೈ: ಜಿಎಸ್ಎಂ ಅಸೋಸಿಯೇಶನ್ಸ್ ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ 2025ರ ವೇಳೆಗೆ ವಿಶ್ವದಾದ್ಯಂತ ಕನಿಷ್ಠ 170 ಕೋಟಿ ಜನರು 5ಜಿ ನೆಟ್ವರ್ಕ್ ಬಳಸಲಿದ್ದಾರೆ. ಹೆಚ್ಚು ಸಾಮರ್ಥ್ಯದ ಬ್ರಾಡ್ ಬ್ಯಾಂಡ್ ಬಳಕೆಗೆ ಅಗತ್ಯವಿರುವ ನೆಟ್ವರ್ಕ್ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಪಂಚದ ಬಹುತೇಕ ದೇಶಗಳಲ್ಲಿ ಸಮರೋಪಾದಿಯಲ್ಲಿ ಕೆಲಸಗಳು ನಡೆಯುತ್ತಿವೆ. ಈಗಾಗಲೇ 5ಜಿ ನೆಟ್ವರ್ಕ್ ಬಳಕೆಯಲ್ಲಿರುವ ರಾಷ್ಟ್ರಗಳತ್ತ ಗಮನಿಸಿದರೆ ವ್ಯಾಪಾರ ವಹಿವಾಟು, ಲೈವ್ ಸ್ಟ್ರೀಮಿಂಗ್, ಗೇಮಿಂಗ್, ಉದ್ಯಮ ಹಾಗೂ ವೈರ್ ಲೆಸ್ ತಂತ್ರಜ್ಞಾನದಲ್ಲಿ ಬಂಡವಾಳ ಹೂಡಿಕೆ ಮುಂತಾದ ಕ್ಷೇತ್ರಗಳಿಗೆ 5ಜಿ ತಂತ್ರಜ್ಞಾನ ಗಮನಾರ್ಹ ಮಟ್ಟದ ಉತ್ತೇಜನ ನೀಡಲಿದೆ ಎಂಬುದು ತಿಳಿಯುತ್ತದೆ.
ಈಗಾಗಲೇ ಹಲವಾರು ಟೆಲಿಕಾಂ ಕಂಪನಿಗಳು ಪ್ರಪಂಚದ ಹಲವಾರು ದೇಶಗಳಲ್ಲಿ 5ಜಿ ನೆಟ್ವರ್ಕ್ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿವೆ. ಬಹುತೇಕ ಈ ವರ್ಷಾಂತ್ಯಕ್ಕೆ ಹಲವಾರು ರಾಷ್ಟ್ರಗಳಲ್ಲಿ 5ಜಿ ನೆಟ್ವರ್ಕ್ ಜನರ ಬೆರಳ ತುದಿಗೆ ಸಿಗುವ ಎಲ್ಲ ಸಾಧ್ಯತೆಗಳಿವೆ. ಅತ್ಯಂತ ವೇಗದ ವೈರ್ ಲೆಸ್ ಸಂಹವನ ಹಾಗೂ ಏಕಕಾಲಕ್ಕೆ ಹಲವಾರು ಸಾಧನ ಸಲಕರಣೆಗಳನ್ನು ಸಂಪರ್ಕಿಸುವ ಸಾಮರ್ಥ್ಯದ 5ಜಿ ನೆಟ್ವರ್ಕ್ ತಂತ್ರಜ್ಞಾನ ಮಿಂಚಿನ ವೇಗದ ಡೇಟಾ ಸ್ಪೀಡ್ ಒದಗಿಸಲಿದೆ.
4ಜಿ ವೇಗದಲ್ಲಿ 8ಕೆ ತಂತ್ರಜ್ಞಾನದ ಸಿನಿಮಾವೊಂದನ್ನು ಸಂಪೂರ್ಣವಾಗಿ ಡೌನ್ಲೋಡ್ ಮಾಡಲು ಸುಮಾರು 30 ನಿಮಿಷ ಬೇಕಾಗುತ್ತದೆ. ಅದೇ 5ಜಿಯಲ್ಲಾದರೆ ಕೆಲವೇ ಸೆಕೆಂಡುಗಳಲ್ಲಿ ಡೌನ್ಲೋಡ್ ಆಗಿ ಹೋಗಿರುತ್ತದೆ. ಆದರೆ, ಕೊರೊನಾ ವೈರಸ್ ಬಿಕ್ಕಟ್ಟಿನ ಕಾರಣ ಈ ಕೆಲಸಗಳಿಗೆ ಸಾಕಷ್ಟು ಅಡ್ಡಿಯಾಗಿದೆ. ಏನೇ ಆದರೂ ಕೆಲವೇ ತಿಂಗಳುಗಳಲ್ಲಿ 5ಜಿ ತಂತ್ರಜ್ಞಾನ ಜನಸಾಮಾನ್ಯರ ಬಳಿಗೆ ತಲುಪುವುದಂತೂ ಖಚಿತ. ಟೆಲಿಕಾಂ ಸಂಪರ್ಕ ಸೇವಾ ಕಂಪನಿಗಳು ವಿಶ್ವಾದ್ಯಂತದ ತಮ್ಮ ಈಗಿನ ತಂತ್ರಜ್ಞಾನಗಳನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುತ್ತಿವೆ.
ವಿಶ್ವಾಸಾರ್ಹ 5ಜಿ ಸಂಪರ್ಕವು ವಾಸ್ತವಿಕ ಸಂಗತಿಗಳನ್ನು ಆಧರಿಸಿದೆ. ಸೆಲ್ ಗಳೆಂದು ಕರೆಯಲಾಗುವ ಚಿಕ್ಕ ಚಿಕ್ಕ ಭೌಗೋಳಿಕ ಪ್ರದೇಶಗಳಲ್ಲಿ ಸ್ಥಳೀಯವಾಗಿ ಇಡಲಾದ ಆ್ಯಂಟೆನಾ ಜಾಲಗಳ ಮೂಲಕ ರೇಡಿಯೊ ತರಂಗಾಂತರಗಳನ್ನು ಹಾಯಿಸುವ ಮುಖಾಂತರ 5ಜಿ ಸಂಪರ್ಕವನ್ನು ಸಾಧಿಸಲಾಗುತ್ತದೆ. ಈ ಸ್ಥಳೀಯ ಆ್ಯಂಟೆನಾಗಳು ಇಂಟರ್ನೆಟ್ ಮತ್ತು ಟೆಲಿಫೋನ್ ಜಾಲಕ್ಕೆ ಬ್ಯಾಕ್ ಹಾಲ್ ಟೆಕ್ನಾಲಜಿ ಮತ್ತು ಹೆಚ್ಚಿನ ಬ್ಯಾಂಡವಿಡ್ತ್ ಆಪ್ಟಿಕಲ್ ಫೈಬರ್ ಗಳನ್ನು ಬಳಸಿಕೊಂಡು ಕನೆಕ್ಟ್ ಆಗಿರುತ್ತವೆ. ಈ ಜಾಲವು ಪ್ರತಿ ಚದರ ಕಿಲೋಮೀಟರ್ ಪ್ರದೇಶದಲ್ಲಿ 10 ಲಕ್ಷ ಡಿವೈಸ್ ಗಳನ್ನು ಏಕಕಾಲಕ್ಕೆ ಕನೆಕ್ಟ್ ಮಾಡಿಸುವ ಅಗಾಧ ಸಾಮರ್ಥ್ಯ ಹೊಂದಿರುತ್ತದೆ. ಈಗಿನ 4ಜಿ ತಂತ್ರಜ್ಞಾನವು ಪ್ರತಿ ಚದರ ಕಿಲೋಮೀಟರ್ ಪ್ರದೇಶದಲ್ಲಿ 1 ಲಕ್ಷ ಡಿವೈಸ್ ಗಳನ್ನು ಕನೆಕ್ಟ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಹೋಲಿಕೆಯನ್ನು ನೋಡಿದರೆ 5ಜಿ ತಂತ್ರಜ್ಞಾನದ ಅಗಾಧತೆ ನಮಗೆ ಅರಿವಾಗುತ್ತದೆ.
ಕನಿಷ್ಠ ಎಂದರೂ 1 ಜಿಬಿಪಿಎಸ್ ವೇಗದಲ್ಲಿ ಡೇಟಾ ವರ್ಗಾವಣೆಯ ಮೂಲಕ ವಿಶ್ವಾಸಾರ್ಹ ಸಂಪರ್ಕವನ್ನು 5ಜಿ ತಂತ್ರಜ್ಞಾನ ಒದಗಿಸಲಿದೆ. 4ಜಿ ಗೆ ಹೋಲಿಸಿದರೆ ಡೇಟಾ ರೇಟ್ 100 ಪಟ್ಟು ಹೆಚ್ಚಾಗಿರುತ್ತದೆ. ಎಲ್ಲ ವರ್ಗದ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡಿರುವ ಟೆಲಿಕಾಂ ಕಂಪನಿಗಳು ಕಡಿಮೆ ದರದಲ್ಲಿ 5ಜಿ ತಂತ್ರಜ್ಞಾನವನ್ನು ಗ್ರಾಹಕರಿಗೆ ತಲುಪಿಸಲು ಪ್ರಯತ್ನಿಸುತ್ತಿವೆ.
5ಜಿ ಬಂದ ಮೇಲೆಯೂ 4ಜಿ ತಂತ್ರಜ್ಞಾನವು ಎಂದಿನಂತೆ ಅಬಾಧಿತವಾಗಿ ಕಾರ್ಯಾಚರಣೆಯಲ್ಲಿರುತ್ತದೆ. ಇದೇ ನೆಟ್ವರ್ಕ್ ಮೇಲೆ ಹೆಚ್ಚುವರಿಯಾಗಿ 5ಜಿ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ. ಟೆಲಿಕಾಂ ಕಂಪನಿಗಳ ಬೇಡಿಕೆಯಂತೆ ಸದ್ಯ ಬಳಕೆಯಲ್ಲಿರುವ ವೈಫೈ, ಜಿಎಸ್ಎಂ, ಎಲ್ ಟಿಇ-ಎ, 3ಜಿ, ಎಲ್ ಟಿಇ, ಎಚ್ಎಸ್ ಪಿಎ ಸಂಪರ್ಕ ತಂತ್ರಜ್ಞಾನಗಳು ಮುಂದೆಯೂ ಜಾರಿಯಲ್ಲಿರುತ್ತವೆ. 5ಜಿ ಬಂದ ಬಳಿಕವೂ 4ಜಿ ಫೋನ್ ಔಟ್ ಡೇಟೆಡ್ ಆಗುವುದಿಲ್ಲ. ಅದು ಎಂದಿನಂತೆ ಸುಸೂತ್ರವಾಗಿ ಕೆಲಸ ಮಾಡಲಿದೆ. 5ಜಿ ಬಂದ ತಕ್ಷಣ ಯಾರೂ ಹೊಸ 5ಜಿ ಕಂಪ್ಯಾಟಿಬಲ್ ಫೋನ್ ಕೊಳ್ಳಲೇಬೇಕೆಂದಿಲ್ಲ. ಆದರೆ, 5ಜಿ ವೇಗವನ್ನು ನೀವು ಬಳಸಲು ಇಚ್ಛಿಸುವವರು ಮಾತ್ರ ಹೊಸ 5ಜಿ ಫೋನ್ ಖರೀದಿಸಿದರೆ ಸಾಕು.