ಕೇವಲ 499 ರೂ.ಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭ!
Friday, July 16, 2021
ಬೆಂಗಳೂರು: ಓಲಾ ಸಂಸ್ಥೆಯು ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಹೊರಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಸ್ಕೂಟರ್ನ ಬುಕ್ಕಿಂಗ್ನ್ನು ಆರಂಭಿಸಿದ್ದು, ಕೇವಲ 499 ರೂ.ಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭವಾಗಿದೆ.
ಆದರೆ ಸ್ಕೂಟರ್ ನ ವಿಶೇಷತೆ ಬಗ್ಗೆ ಸಂಸ್ಥೆ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲ. ಆದರೆ ಸ್ಕೂಟರ್ ಇಷ್ಟವಾಗಿಲ್ಲವಾದರೆ ಬುಕ್ಕಿಂಗ್ ಹಣವನ್ನು ಸಂಪೂರ್ಣವಾಗಿ ವಾಪಸು ಕೊಡುವುದಾಗಿಯೂ ಸಂಸ್ಥೆ ತಿಳಿಸಿದೆ. ರಿಫಂಡ್ ಮಾಡಲು ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಹೇಳಲಾಗಿದೆ.
ಬುಕ್ಕಿಂಗ್ ಬಗ್ಗೆ ಸಂಸ್ಥೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಕಪ್ಪು ಬಣ್ಣದ ಸ್ಕೂಟರ್ ಇರುವ ಪೋಸ್ಟರ್ನಲ್ಲಿ ಬುಕ್ಕಿಂಗ್ ಆರಂಭವಾಗಿರುವುದಾಗಿ ತಿಳಿಸಲಾಗಿದೆ. ಇದಿನ್ನೂ ಆರಂಭ ಎಂದು ಸಂಸ್ಥೆ ಹೇಳಿಕೊಂಡಿದೆ. ಮುಂಬರುವ ದಿನಗಳಲ್ಲಿ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊರಬಿಡುವುದಾಗಿ ತಿಳಿಸಲಾಗಿದೆ.
ಸ್ಕೂಟರ್ ಬುಕ್ಕಿಂಗ್ ಮಾಡುವವರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ವೆಬ್ಸೈಟ್ನಲ್ಲಿ ಖಾತೆ ತೆರೆದು ಬುಕ್ಕಿಂಗ್ ಮಾಡಬಹುದು. ಸಂಸ್ಥೆ ಹಿಂದೆ ಯಾವ ಬಣ್ಣದ ಸ್ಕೂಟರ್ ಅನ್ನು ನೀವು ಬಯಸುತ್ತೀರಿ ಎಂದು ಜನರಲ್ಲಿ ಕೇಳಿತ್ತು. ಆದ್ದರಿಂದ ಜನರ ಬೇಡಿಕೆ ಪ್ರಕಾರವೇ ಸ್ಕೂಟರ್ ಬಣ್ಣಗಳನ್ನು ನಿರ್ಧರಿಸಿರಬಹುದು ಎನ್ನಲಾಗಿದೆ. ತಮಿಳುನಾಡಿನಲ್ಲಿ ಓಲಾ ಪ್ಲಾಂಟ್ ತೆರೆಯಲಾಗಿದ್ದು, ಅಲ್ಲಿಯೇ ಎಲೆಕ್ಟ್ರಿಕ್ ಸ್ಕೂಟರ್ಗಳ ನಿರ್ಮಾಣವಾಗುತ್ತಿದೆ. ಅದಕ್ಕೆಂದು ಸಂಸ್ಥೆ 2,400 ಕೋಟಿ ರೂ. ಹೂಡಿಕೆ ಮಾಡಿದೆ.