
3 ಸಾವಿರ ಸಾಲ ಪಡೆದು ಮೊಬೈಲ್ ಖರೀದಿಸಿ ಲಕ್ಷ ಲಕ್ಷ ಪಡೆಯುತ್ತಿದ್ದಾನೆ ಈತ... ಇವನ ಕಥೆಯೆ ಇಂಟ್ರೆಸ್ಟಿಂಗ್...
Thursday, July 8, 2021
ಭುವನೇಶ್ವರ್: ಲಾಕ್ಡೌನ್ ಬಳಿಕ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಆದರೆ ಕೆಲವರು ಸಂಕಷ್ಟದ ಸಮಯದಲ್ಲೂ ಜಾಣರಂತೆ ವರ್ತಿಸಿ ಜೀವನವೆಂಬ ಪಯಣದಲ್ಲಿ ಗೆಲುವು ಸಾಧಿಸುತ್ತಾರೆ. ಇದಕ್ಕೆ ಒಡಿಶಾ ಮೂಲದ ವ್ಯಕ್ತಿ ತಾಜಾ ಉದಾಹರಣೆ ಆಗಿದ್ದಾರೆ. ತಿನ್ನಲು ಏನೂ ಇಲ್ಲದೆ ಹಸಿವಿನ ಬಗ್ಗೆ ಚಿಂತಿಸುತ್ತಿದ್ದ ಈತ ತನ್ನ ಮನಸ್ಸನ್ನು ಬೇರೆಡೆಗೆ ಹರಿಬಿಡಲೆಂದು ಯೂಟ್ಯೂಬ್ ವೀಡಿಯೋಗಳನ್ನು ನೋಡಲು ಆರಂಭಿಸಿದ ಈಗ ಅದೇ ಯೂಟ್ಯೂಬ್ನಲ್ಲಿ ಇಸಾಕ್ ಮುಂಡಾ ಹೆಸರಿನಲ್ಲಿ ಪ್ರಖ್ಯಾತಿಯಾಗಿದ್ದಾನೆ.
ಮುಂಡಾ ಎಂಬ ಈ ವ್ಯಕ್ತಿ ಒಡಿಶಾದ ಸಂಬಲ್ಪುರ್ ಜಿಲ್ಲೆಯ ಬುಡಕಟ್ಟು ಮೂಲದ ವ್ಯಕ್ತಿ. ದಿನಗೂಲಿ ನೌಕರನಾಗಿದ್ದ ಮುಂಡಾ ಲಾಕ್ಡೌನ್ನಿಂದ ಕೆಲಸವಿಲ್ಲದೆ, ಊಟಕ್ಕೂ ಪರದಾಡುತ್ತಿದ್ದ. ಇತ್ತ ತನ್ನ ಹಸಿವನ್ನು ಮರೆಯಲು ಯೂಟ್ಯೂಬ್ ವೀಡಿಯೋ ನೋಡಲು ಆರಂಭಿಸಿದ ಮುಂಡಾ, ಫುಡ್ ಬ್ಲಾಗ್ಗರ್ಸ್ನಿಂದ ಸ್ಫೂರ್ತಿ ಪಡೆದು ತಾನೇ ಒಂದು ಚಾನೆಲ್ ತೆರೆದು ಮಾರ್ಚ್ 2020ರಿಂದ ವೀಡಿಯೋ ಮಾಡಲು ಆರಂಭಿಸಿದ.
ಮುಂಡಾ ಮೊದಲು ಒಂದು ಪ್ಲೇಟ್ನಲ್ಲಿ ಅನ್ನವನ್ನು ಹಾಕಿಕೊಂಡು, ಸಾಂಬಾರ್, ಟೊಮ್ಯಾಟೋ ಮತ್ತು ಹಸಿರು ಮೆಣಸಿನಕಾಯಿಗಳನ್ನು ತಿನ್ನುತ್ತಿರುವ ವೀಡಿಯೋ ಮಾಡಿದ. ಅದು ಈವರೆಗೂ ಅರ್ಧ ಮಿಲಿಯನ್ ವೀಕ್ಷಣೆ ಕಂಡಿದೆ. ಅದರಿಂದ ಸ್ಪೂರ್ತಿ ಪಡೆದ ಆತ ವೀಡಿಯೋ ಮಾಡಲೆಂದೇ 3 ಸಾವಿರ ರೂ. ಸಾಲ ಮಾಡಿ ಒಂದು ಸ್ಮಾರ್ಟ್ಫೋನ್ ಕೊಂಡುಕೊಂಡಿದ್ದಾನೆ. ನನ್ನ ಬಡ ಮನೆ ಮತ್ತು ಹಳ್ಳಿಯಲ್ಲಿ ನಾನು ಹೇಗೆ ಜೀವನ ನಡೆಸುತ್ತೇವೆ ಎಂಬುದರ ಬಗ್ಗೆಯೇ ವೀಡಿಯೊಗಳನ್ನು ತಯಾರಿಸುತ್ತೇನೆ.
ಮುಂಡಾ ಸದ್ಯ ಯೂಟ್ಯೂಬ್ನಲ್ಲಿ 7 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಅವರು ಇಸಾಕ್ ಮುಂಡಾ ಈಟಿಂಗ್ (Isak Munda Eating) ಎಂದು ತಮ್ಮ ಯೂಟ್ಯೂಬ್ ಚಾನೆಲ್ ಗರ ಹೆಸರಿಟ್ಟಿದ್ದಾರೆ. ಅವರ ಹೆಚ್ಚಿನ ವೀಡಿಯೋಗಳು ಸ್ಥಳೀಯತೆ ಮತ್ತು ಪ್ರಾದೇಶಿಕ ಪಾಕಪದ್ಧತಿಯನ್ನು ತೋರಿಸುತ್ತವೆ ಮತ್ತು ಸರಳ, ದೈನಂದಿನ ಆಹಾರ ವೀಡಿಯೋಗಳು ಇಂದು ದಿನಗೂಲಿ ಕಾರ್ಮಿಕನನ್ನು ಲಕ್ಷಾಧಿಪತಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ. 2020 ಆಗಸ್ಟ್ನಲ್ಲಿ ಯೂಟ್ಯೂಬ್ನಿಂದ 5 ಲಕ್ಷ ರೂ. ಆದಾಯವನ್ನು ಸ್ವೀಕರಿಸಿದೆ. ಬಂದ ಹಣದಿಂದ ಮನೆಯನ್ನು ನಿರ್ಮಿಸಿದ್ದೇನೆ. ನನ್ನ ಕುಟುಂಬದ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಿದ್ದೇನೆ ಎಂದು ಮುಂಡಾ ಸಂತಸ ಹಂಚಿಕೊಂಡಿದ್ದಾರೆ.