ಇಲ್ಲೊಬ್ಬನಿದ್ದಾನೆ ತಿಂಗಳ 25 ದಿನಗಳ ಕಾಲ ನಿದ್ದೆ ಮಾಡುವ ಆಧುನಿಕ ಕುಂಭಕರ್ಣ!
Wednesday, July 14, 2021
ನಾಗ್ಪುರ: ಇಲ್ಲೊಬ್ಬ ಆಧುನಿಕ ಕುಂಭಕರ್ಣನಿದ್ದು ಈತ ತಿಂಗಳ 25 ದಿನಗಳ ಕಾಲ ನಿದ್ದೆಯಲ್ಲೇ ಕಾಲ ಕಳೆಯುತ್ತಾನಂತೆ. ಅಂದರೆ ಈತ ವರ್ಷದ 300 ದಿನ ಮಲಗಿಯೇ ಇರುತ್ತಾನೆ. ಇದು ಅಚ್ಚರಿಯಾದರೂ ಸತ್ಯ.
ರಾಜಸ್ಥಾನದ ನಾಗ್ಪುರ ಜಿಲ್ಲೆಯ ಭದ್ವಾ ಗ್ರಾಮದ ನಿವಾಸಿ ಪುರಖರಂ (42) ಆಧುನಿಕ ಕುಂಭಕರ್ಣ ಎಂದೇ ಖ್ಯಾತಿ ಪಡೆದಿದ್ದಾರೆ. ಈತ ಆ್ಯಕ್ಸಿಸ್ ಹೈಪರ್ಸೊಮ್ನಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದೇ ಅತಿಯಾದ ನಿದ್ರೆಗೆ ಕಾರಣವಂತೆ.
ಪುರಖರಂ ಕಳೆದ 23 ವರ್ಷಗಳಿಂದ ಆ್ಯಕ್ಸಿಸ್ ಹೈಪರ್ಸೊಮ್ನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ವಿರಳಾತಿವಿರಳ ಕಾಯಿಲೆಯಿಂದಾಗಿ ಇವರು ತಿಂಗಳಲ್ಲಿ ಐದು ದಿನ ಮಾತ್ರ ತಮ್ಮ ಅಂಗಡಿಯನ್ನು ನೋಡಿಕೊಳ್ಳಲು ಸಾಧ್ಯ. ನಿದ್ರೆಗೆ ಜಾರಿದಲಿ ಅವರನ್ನು ಎಬ್ಬಿಸುವುದೇ ಬಹಳ ಕಷ್ಟವಂತೆ. ಆರಂಭದಲ್ಲಿ ಇವರು 15 ಗಂಟೆಗಳು ನಿದ್ರಿಸುತ್ತಿದ್ದರಂತೆ, ವರ್ಷಗಳು ಕಳೆದಂತೆ ಅವರ ನಿದ್ರೆಯ ಅವಧಿಯು ಅನೇಕ ಗಂಟೆಯಿಂದ ಅನೇಕ ದಿನಗಳವರೆಗೆ ಏರಿಕೆಯಾಯಿತು. ಇತ್ತ ಎಷ್ಟೇ ಚಿಕಿತ್ಸೆ ಕೊಡಿಸಿದರು ಪ್ರಯೋಜನ ಆಗಲಿಲ್ಲ. ಇದೀಗ ಅವರ ಕಾಯಿಲೆ ಬಹಳಷ್ಟು ಬಿಗಡಾಯಿಸಿದ್ದು, ತಿಂಗಳಲ್ಲಿ 20 ರಿಂದ 25 ದಿನಗಳು ನಿದ್ರೆಗೆ ಜಾರುತ್ತಿದ್ದಾರಂತೆ
ಇದರಿಂದ ಪುರಖರಂ ಮಲಗಿರುವಾಗಲೇ ಅವರ ಕುಟುಂಬ ಸ್ನಾನ ಮಾಡಿಸುವುದು ಮತ್ತು ಊಟ ಮಾಡಿಸುವುದು ಮಾಡುತ್ತಾರೆಂತೆ. ಒಮ್ಮೊಮ್ಮೆ ಅಂಗಡಿಯಲ್ಲಿ ಇರುವಾಗಲೇ ನಿದ್ರೆಗೆ ಜಾರಿ ಬಿಡುತ್ತಾರೆ ಎಂದು ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಾರೆ. ಚಿಕಿತ್ಸೆ ಮತ್ತು ಅತಿಯಾದ ನಿದ್ರೆಯಿಂದ ಅವರ ದೇಹ ತುಂಬಾ ಆಯಾಸದಿಂದ ಕೂಡಿದೆ ಹಾಗೂ ದೇಹದಲ್ಲಿ ಉತ್ಪಾದನಾ ಸಾಮರ್ಥ್ಯವೂ ಬಹುತೇಕ ನಿಂತಿದೆಯಂತೆ. ಪ್ರಸ್ತುತ ಅವರ ಆರೋಗ್ಯ ಪರಿಸ್ಥಿತಿಯಿಂದಾಗಿಯೇ ವಿಪರೀತ ತಲೆನೋವು ಮತ್ತು ಇತರೆ ಕಾಯಿಲೆಗಳ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಲಾಗಿದೆ. ಪುರಖರಂ ಅವರು ಕಾಯಿಲೆಯಿಂದ ಗುಣವಾಗಿ ಶೀಘ್ರದಲ್ಲೇ ಸಹಜ ಜೀವನಕ್ಕೆ ಮರಳಲಿದ್ದಾರೆ ಎಂದು ಆತನ ಪತ್ನಿ ಲಿಚ್ಮಿ ದೇವಿ ಮತ್ತು ತಾಯಿ ಕನ್ವಾರಿ ದೇವಿ ಭರವಸೆ ಇಟ್ಟುಕೊಂಡಿದ್ದಾರೆ.