ಆನ್ಲೈನ್ ತರಗತಿಗಳಿಗೆ ಸೂಕ್ತವೆನಿಸುವ ನೂತನ ಟ್ಯಾಬ್ ಸ್ಯಾಮ್ ಸಂಗ್ ಗೆಲಾಕ್ಸಿಟ್ಯಾಬ್ ಎ7 ಲೈಟ್ ಬಿಡುಗಡೆ
Wednesday, July 14, 2021
ಮುಂಬೈ: ಕೋವಿಡ್ ಸೋಂಕಿನ ಬಳಿಕ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಮೂಲಕವೇ ಶಿಕ್ಷಣ ದೊರಕುತ್ತಿದೆ. ಅದಕ್ಕಾಗಿ ಅವರು ಮೊಬೈಲ್ ಫೋನನ್ನೋ, ಲ್ಯಾಪ್ ಟಾಪ್, ಪಿ.ಸಿ. ಟ್ಯಾಬ್ ಅನ್ನೋ ಅವಲಂಬಿಸಬೇಕಾಗಿದೆ. ಕೋವಿಡ್ ಬಳಿಕ ಆನ್‍ಲೈನ್ ತರಗತಿಗಳಿಗೆ ಅನಿವಾರ್ಯವಾಗಿ ಟ್ಯಾಬ್ ಗಳಿಗೆ ಬೇಡಿಕೆ ಕುದುರಿದೆ. ಮೊಬೈಲ್ ಪೋನಿನ ಪರದೆಗಿಂತ ದೊಡ್ಡದಾದ ಟ್ಯಾಬ್‍ಗಳು ಆನ್‍ಲೈನ್ ಪಾಠಗಳಿಗೆ ಸೂಕ್ತವಾಗಿದ್ದು, ಆದ್ದರಿಂದ ವಿದ್ಯಾರ್ಥಿಗಳು ಟ್ಯಾಬ್ ಬಗ್ಗೆ ಆಸಕ್ತರಾಗಿದ್ದಾರೆ.
ಇದನ್ನರಿತ ಕಂಪೆನಿಗಳು ನೂತನ ಟ್ಯಾಬ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಟ್ಯಾಬ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ ಸಂಗ್ ಇತ್ತೀಚಿಗೆ ಸ್ಯಾಮ್ ಸಂಗ್ ಗೆಲಾಕ್ಸಿ ಟ್ಯಾಬ್ ಎ7 ಲೈಟ್ ಎಂಬ ನೂತನ ಟ್ಯಾಬ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಸಾಮಾನ್ಯವಾಗಿ ಟ್ಯಾಬ್ ಗಳಲ್ಲಿ 10.4 ಇಂಚು ಹಾಗೂ 8.7 ಇಂಚು ಎರಡು ಅಳತೆಯ ಪರದೆಗಳಿರುತ್ತವೆ.
ಇದು ಗೆಲಾಕ್ಸಿ ಟ್ಯಾಬ್ ಎ7 ಲೈಟ್ ನಲ್ಲಿ 8.7 ಇಂಚಿನ ಪರದೆಯಿದ್ದು 10.4 ಇಂಚಿನ ಪರದೆಯಿರುವ ಟ್ಯಾಬ್ ಸ್ವಲ್ಪ ದೊಡ್ಡದಾಯ್ತು ಎನ್ನುವವರಿಗೆ ಇದು ಸೂಕ್ತವಾಗಿದೆ. ಒಂದೇ ಕೈಯಲ್ಲಿ ಹಿಡಿದು ಬಳಸುವಷ್ಟು ಅನುಕೂಲಕರವಾಗಿದೆ. ಮೊಬೈಲ್ ಫೋನಿನ ಚಿಕ್ಕಪರದೆಯಲ್ಲಿ ನೋಡುವುದು ಕಣ್ಣಿಗೆ ಶ್ರಮದಾಯಕ ಎನಿಸುವವರಿಗೆ, ಈ ಪರದೆಯ ಅಳತೆ ಸಮಾಧಾನ ತರುತ್ತದೆ. ಶೇ. 80ರಷ್ಟು ಸ್ಕ್ರೀನ್ ಟು ಬಾಡಿ ರೇಶಿಯೋ ಇದೆ. ಎಲ್‍ಸಿಡಿ ಡಿಸ್ ಪ್ಲೇ ಹೊಂದಿದ್ದು, ಫುಲ್ ಎಚ್‍ಡಿ ಇರುವುದರಿಂದ ಚಿತ್ರಗಳು, ವೀಡಿಯೋಗಳ ವೀಕ್ಷಣೆ ತೃಪ್ತಿಕರವಾಗಿದೆ. ಇದರ ತೂಕ 371 ಗ್ರಾಂ ಇದ್ದು, ಸ್ಲಿಮ್ ಕೂಡ ಇದೆ. ಲೋಹದ ದೇಹ ಹೊಂದಿರುವುದು ವಿಶೇಷ. ಗೆಲಾಕ್ಸಿ ಟ್ಯಾಬ್ ಎ7 ಲೈಟ್ ಸಿಮ್ ಕಾರ್ಡ್ ( ಸಿಂಗಲ್ ಸಿಮ್) ಹಾಕುವ ಹಾಗೂ ಸಿಮ್ ಕಾರ್ಡ್ ರಹಿತವಾಗಿ ವೈಫೈನಲ್ಲಿ ಮಾತ್ರ ಬಳಸಬಹುದಾದ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಸಿಮ್ ಮಾದರಿಯ ಟ್ಯಾಬ್‍ನಲ್ಲಿ ಕರೆಗಳು ಬಂದಾಗ ಕರೆಗಳನ್ನು ಸ್ವೀಕರಿಸಿ ಮಾತನಾಡಲು ಅಡ್ಡಿಯಿಲ್ಲ. ಹಾಗೆಂದು ಇದು ಮೊಬೈಲ್ ಫೋನಿನಂತೆ ಮಾತನಾಡುವುದಕ್ಕೆ ಹೆಚ್ಚು ಅನುಕೂಲಕರವಲ್ಲ. ಯಾವಾಗಲಾದರೂ ಅನಿವಾರ್ಯತೆ ಎದುರಾದಾಗ ಮಾತನಾಡಲು ಅಷ್ಟೇನೂ ತ್ರಾಸದಾಯಕವಲ್ಲ.
ಗೆಲಾಕ್ಸಿ ಟ್ಯಾಬ್ ಎ7 ಲೈಟ್ 3 ಜಿಬಿ ರ್ಯಾಮ್, 32 ಜಿಬಿ ಮೆಮರಿ ಕಾರ್ಡ್ ಹೊಂದಿದೆ. ಅಗತ್ಯವೆನಿಸಿದಲ್ಲಿ 1 ಟಿಬಿಯವರೆಗೂ ಮೆಮೊರಿಕಾರ್ಡ್ ಹಾಕಿಕೊಳ್ಳಬಹುದು. ಆನ್‍ಲೈನ್ ತರಗತಿಗಳು, ಝೂಮ್ ಮೀಟಿಂಗ್ ಮತ್ತಿತರ ಸಾಧಾರಣ ಬಳಕೆಗೆ ಈ ರ್ಯಾಮ್ ಮತ್ತು ಮೆಮೆರಿ ಕಾರ್ಡ್ ಸಾಕಾಗುತ್ತದೆ. ಆನ್‍ಲೈನ್ ತರಗತಿಗಳು, ಮೀಟಿಂಗ್‍ಗಳಿಗೆ ಮುಂಬದಿ ಕ್ಯಾಮರಾ ಅಗತ್ಯವಿರುವುದರಿಂದ ಹಿಂಬದಿ ಕ್ಯಾಮರಾ ಬದಲು ಮುಂಬದಿ ಕ್ಯಾಮರಾಕ್ಕೆ ಕಂಪೆನಿಗಳು ಹೆಚ್ಚು ಒತ್ತು ಕೊಟ್ಟರೆ ಒಳ್ಳೆಯದು ಅನಿಸುತ್ತದೆ. ಈ ಟ್ಯಾಬ್‍ನಲ್ಲಿ ಹಿಂಬದಿಗೆ ಇರುವ 8 ಮೆ.ಪಿ. ಕ್ಯಾಮರಾ, ಮುಂಬದಿಯಲ್ಲಿ ಇದ್ದರೆ ಚೆನ್ನಾಗಿರುತ್ತಿತ್ತು. ಗೆಲಾಕ್ಸಿ ಟ್ಯಾಬ್ ಎ7 ಲೈಟ್, ಆಂಡ್ರಾಯ್ಡ್ 11 ಕಾರ್ಯಾಚರಣೆ ವ್ಯವಸ್ಥೆ ಹೊಂದಿದೆ. ಹೀಗಾಗಿ ಮೊಬೈಲ್ ಫೋನಿನಲ್ಲಿ ದೊರಕುವ ಯೂಸರ್ ಫೇಸ್ ಇಲ್ಲಿಯೂ ದೊರಕುತ್ತದೆ. ಇದು ಮೀಡಿಯಾಟೆಕ್ ಎಂಟಿ8768ಟಿ ಪ್ರೊಸೆಸರ್ ಹೊಂದಿದೆ. ಬಳಕೆಯಲ್ಲಿ ಯಾವುದೇ ಅಡೆತಡೆ ಕಂಡುಬರುವುದಿಲ್ಲ. ಮಧ್ಯಮ ದರ್ಜೆಯ ಟ್ಯಾಬ್‍ಗಳಲ್ಲಿ ನಿರೀಕ್ಷಿಸಬಹುದಾದ ವೇಗವಿದೆ. 5100 ಎಂಎಎಚ್ ಬ್ಯಾಟರಿ ಹೊಂದಿದೆ. ಇದಕ್ಕೆ 15 ವ್ಯಾಟ್‍ನ ವೇಗದ ಚಾರ್ಜರ್ ನೀಡಲಾಗಿದೆ. ಟೈಪ್ ಸಿ ಪೋರ್ಟ್ ನೀಡಲಾಗಿದೆ. ಆರಂಭಿಕ ಮಧ್ಯಮ ದರ್ಜೆಯ ಟ್ಯಾಬ್‍ಗಳಿಗೆ ಹೋಲಿಸಿದರೆ ಚಾರ್ಜಿಂಗ್ ವೇಗ ಚೆನ್ನಾಗಿದೆ. ಹೆಚ್ಚಿನ ಬಳಕೆ ಮಾಡಿದರೂ ಬ್ಯಾಟರಿ 1 ದಿನ ಬಾಳಿಕೆ ಬರುತ್ತದೆ. ಇದಕ್ಕೆ ಡಾಲ್ಬಿ ಅಟ್‍ಮೋಸ್ ಸ್ಪೀಕರ್ ಸೌಲಭ್ಯ ನೀಡಲಾಗಿದೆ. ಎರಡು ಸ್ಪೀಕರ್ ಸೌಲಭ್ಯವಿದೆ.
ಸಿಮ್ ಕಾರ್ಡ್ ರಹಿತ, ವೈಫೈ ಮಾತ್ರ ಇರುವ ಮಾಡೆಲ್ 11,999 ರೂ. ಇದೆ. ಈ ಮಾದರಿ ಅಮೆಜಾನ್ ನಲ್ಲಿ ಲಭ್ಯ. ಸಿಂಗಲ್ ಸಿಮ್ ಮತ್ತು ವೈಫೈ ಇರುವ ಮಾದರಿಗೆ 14,999 ರೂ. ಇದೆ. ಇದು ಫ್ಲಿಪ್‍ಕಾರ್ಟ್‍ನಲ್ಲಿ ದೊರಕುತ್ತದೆ. ತಮ್ಮ ಮಕ್ಕಳ ಆನ್‍ಲೈನ್ ತರಗತಿಯ ಸಲುವಾಗಿಯೇ 15 ಸಾವಿರದೊಳಗೆ ಒಂದು ಮೊಬೈಲ್ ಫೋನ್ ಬೇಕೆಂದುಕೊಳ್ಳುವವರು, ಮೊಬೈಲ್ ಫೋನ್ ಬದಲು ಈ ಟ್ಯಾಬ್ ಅನ್ನು ಆಯ್ಕೆ ಮಾಡಬಹುದು.