
ಕೇರಳ: 24 ವರ್ಷದ ಗರ್ಭಿಣಿಯಲ್ಲಿ ಮೊದಲ ಝಿಕಾ ಸೋಂಕು ಪತ್ತೆ!
Thursday, July 8, 2021
ತಿರುವನಂತಪುರಂ: ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 24 ವರ್ಷದ ಗರ್ಭಿಣಿಯಲ್ಲಿ ಝಿಕಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕೇರಳದಲ್ಲಿ ಝಿಕಾ ಸೋಂಕು ಪ್ರಕರಣ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಜೂನ್ 28 ರಂದು ಈ ಗರ್ಭಿಣಿ ಯುವತಿ ಜ್ವರ, ತಲೆನೋವು ಮತ್ತು ಕೆಂಪು ಕಲೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ರೋಗಿಯ ಮಾದರಿ ಪರೀಕ್ಷೆಯಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೀಗ ತಿರುವನಂತಪುರಂ ಜಿಲ್ಲೆಯ ಶಂಕಿತ 13 ಮಂದಿಯ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)ಗೆ ಕಳುಹಿಸಲಾಗಿದೆ. ಇಲ್ಲಿ ವೈದ್ಯರು ಸೇರಿದಂತೆ 13 ಮಂದಿ ಆರೋಗ್ಯ ಕಾರ್ಯಕರ್ತರಿದ್ದಾರೆ. ಇವರ ವರದಿಯೂ ಪಾಸಿಟಿವ್ ಬರುವ ಶಂಕೆ ವ್ಯಕ್ತವಾಗಿದೆ.
ಝಿಕಾ ಸೋಂಕು ಕಾಣಿಸಿಕೊಂಡ ಗರ್ಭಿಣಿಗೆ ಜುಲೈ 7 ರಂದು ಹೆರಿಗೆಯಾಗಿದೆ. ಸದ್ಯ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಈಕೆಯ ಮನೆ ತಮಿಳುನಾಡಿನ ಗಡಿ ಭಾಗದಲ್ಲಿ ಇದೆ. ಮಹಿಳೆಯ ತಾಯಿಗೂ ಇಂತಹದ್ದೇ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ಸರ್ಕಾರ ಹೇಳಿದೆ.