
24 ವರ್ಷಗಳ ಹಿಂದೆ ಮೃತಪಟ್ಟಿದ್ದ ಎನ್ನಲಾದ ವ್ಯಕ್ತಿ ದಿಢೀರನೇ ಪ್ರತ್ಯಕ್ಷ..!!
Wednesday, July 21, 2021
ಡೆಹ್ರಾಡೂನ್: ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದ ಎನ್ನಲಾದ ವ್ಯಕ್ತಿ ದಿಢೀರನೇ ಪ್ರತ್ಯಕ್ಷವಾದ ಘಟನೆ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಜನೋಲಿ ಎಂಬ ಗ್ರಾಮದಲ್ಲಿ ವರದಿಯಾಗಿದೆ.
ಇಪ್ಪತ್ತನಾಲ್ಕು ವರ್ಷಗಳ ಹಿಂದೆ 72 ವರ್ಷ ವಯಸ್ಸಿನ ಮಾಧವ್ ಸಿಂಗ್ ಮೆಹ್ರಾ ಕಣ್ಮರೆಯಾಗಿದ್ದರು. ಹತ್ತು ವರ್ಷ ಕಾಲ ಮೆಹ್ರಾ ನಿರೀಕ್ಷೆಯಲ್ಲಿಯೇ ಇದ್ದ ಕುಟುಂಬದವರು, ಬಳಿಕ ಆತ ಮೃತಪಟ್ಟಿದ್ದಾಗಿ ಪುರೋಹಿತರು ಹೇಳಿದ ಬಳಿಕ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು.
ಇದೀಗ ಮೆಹ್ರಾ ವಾಪಸ್ಸಾಗಿದ್ದು ಅವರ ನಾಮಕರಣ ಶಾಸ್ತ್ರಕ್ಕೆ ಕುಟುಂಬ ಸಿದ್ಧತೆ ನಡೆಸಿದೆ. ಈ ಶಾಸ್ತ್ರವನ್ನು ಮೆಹ್ರಾ ಮನೆಗೆ ವಾಪಸ್ಸಾದ ಹನ್ನೆರಡು ದಿನಗಳ ಬಳಿಕ ನಡೆಸಲು ನಿರ್ಧರಿಸಲಾಗಿದೆ. ಅವರು ಕಣ್ಮರೆಯಾದ ಸಂದರ್ಭದಲ್ಲಿ 14 ವರ್ಷದ ಬಾಲಕನಾಗಿದ್ದ ರಾಮ್‍ಸಿಂಗ್ ಮೆಹ್ರಾ (38) "ಚಿಕ್ಕಪ್ಪನನ್ನು ನೋಡಿ ನಮಗೆ ಆಘಾತವಾಯಿತು. ಮೊದಲು ನಮಗೆ ನಂಬಲು ಕೂಡಾ ಸಾಧ್ಯವಾಗಲಿಲ್ಲ. ಬಳಿಕ ಅವರು ಹೇಳಿದ್ದನ್ನು ನಂಬಬೇಕಾಯಿತು. ಅವರ ಚಹರೆ ಸಂಪೂರ್ಣ ಬದಲಾಗಿರುವುದು ಮಾತ್ರವಲ್ಲದೇ ನಿಜವಾಗಿಯೂ ಅವರೇ ಎಂಬ ಸಂದೇಹ ಮೂಡಿಸಿತು" ಎಂದು ವಿವರಿಸಿದರು. 24 ವರ್ಷಗಳ ಈ ನಿಗೂಢ ಕಣ್ಮರೆ ಬಗ್ಗೆ ವಿವರ ನೀಡಲು ಮೆಹ್ರಾ ನಿರಾಕರಿಸಿದ್ದಾರೆ.