
ಭಾರತದ 20 ಲಕ್ಷ ಅಕೌಂಟ್ ಗಳನ್ನು ಬ್ಯಾನ್ ಮಾಡಿದ ವಾಟ್ಸಪ್!
ನವದೆಹಲಿ: ಹೊಸ ಐಟಿ ನಿಯಮಗಳ ಅನುಸಾರ ಮೊದಲ ತಿಂಗಳ ಕುಂದುಕೊರತೆ ವರದಿಯಲ್ಲಿ ಮೇ 15ರಿಂದ ಜೂನ್ 15 ರ ಅವಧಿಯಲ್ಲಿ ಎರಡು ಮಿಲಿಯನ್ ಭಾರತೀಯರ ಖಾತೆಗಳನ್ನು ವಾಟ್ಸ್ಆ್ಯಪ್ ಬ್ಯಾನ್ ಮಾಡಲಾಗಿದೆ.
ಹಾನಿಕಾರಕ, ಅನಗತ್ಯ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ತಡೆಗಟ್ಟುವ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ. ಅಸಹಜ ರೀತಿಯಲ್ಲಿ ಸಂದೇಶಗಳನ್ನು ಕಳುಹಿಸುವ ಈ ಖಾತೆಗಳನ್ನು ಗುರುತಿಸಲು ಸುಧಾರಿತ ಸಾಮರ್ಥ್ಯಗಳನ್ನು ನಿರ್ವಹಣೆ ಮಾಡುತ್ತೇವೆ. ಈ ರೀತಿಯ ನಿಂದನೆಗೆ ಪ್ರಯತ್ನಿಸಿದ ಎರಡು ಮಿಲಿಯನ್ ಭಾರತೀಯರ ಖಾತೆಗಳನ್ನು ಮೇ 15ರಿಂದ ಜೂನ್ 15ರ ಅವಧಿಯಲ್ಲಿ ಬ್ಯಾನ್ ಮಾಡಿರುವುದಾಗಿ ವಾಟ್ಸ್ಆ್ಯಪ್ ಗುರುವಾರ ತಿಳಿಸಿದೆ.
ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮೆಸೇಜ್ ಬರುತ್ತಿದ್ದ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ವ್ಯವಸ್ಥೆಗಳ ಅತ್ಯಾಧುನಿಕತೆ ಹೆಚ್ಚಾದಂತೆ 2019ರಿಂದ ಬ್ಯಾನ್ ಆಗುವ ಖಾತೆಗಳ ಸಂಖ್ಯೆಯಲ್ಲಿ ಗಮನಾರ್ಹ ರೀತಿಯಲ್ಲಿ ಏರಿಕೆಯಾಗಿದೆ. ಸ್ವಯಂ ಚಾಲಿತವಾಗಿ ಅಥವಾ ಒಂದೇ ಬಾರಿಗೆ ಹೆಚ್ಚಿನ ರೀತಿಯಲ್ಲಿ ಸಂದೇಶ ಕಳುಹಿಸಲು ಪ್ರಯತ್ನಿಸುವ ಖಾತೆಗಳನ್ನು ಗುರುತಿಸಲಾಗಿದೆ.
ಬ್ಯಾನ್ಗೆ ಮೊರೆ, ಖಾತೆಗೆ ಸಹಕಾರ, ಉತ್ಪನ್ನಕ್ಕೆ ಬೆಂಬಲ ಸೇರಿದಂತೆ ಒಟ್ಟಾರೆ 345 ಕುಂದು ಕೊರತೆಗಳನ್ನು ಆಲಿಸಲಾಗಿದೆ. ಜಾಗತಿಕವಾಗಿ ತಿಂಗಳಿಗೆ ಸರಾಸರಿ ಎಂಟು ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.