
ಸೆಕ್ಸ್ ಬಗ್ಗೆ ಏನಾದರೂ ತಿಳಿದಿದೆಯ? - 13 ವರ್ಷದ ಬಾಲಕಿಗೆ ಪ್ರಶ್ನೆ ಕೇಳಿದ್ದ ಕಂಡಕ್ಟರ್ ಗೆ 1 ವರ್ಷ ಶಿಕ್ಷೆ..
Sunday, July 11, 2021
ಮುಂಬೈ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 13 ವರ್ಷದ ಬಾಲಕಿಗೆ ‘ಸೆಕ್ಸ್ ಬಗ್ಗೆ ಏನಾದರೂ ತಿಳಿದಿದೆಯೆ?’ ಎಂದು ಪ್ರಶ್ನಿಸಿದ್ದ ಬಸ್ ಕಂಡಕ್ಟರ್ಗೆ ಮುಂಬೈನ ವಿಶೇಷ ಕೋರ್ಟ್ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸಂತ್ರಸ್ತ ಬಾಲಕಿ ಸರ್ಕಾರಿ ಬಸ್ನಲ್ಲಿ ಪ್ರತಿದಿನ ಬೆಳಿಗ್ಗೆ ಶಾಲೆಗೆ ಪ್ರಯಾಣಿಸುತ್ತಿದ್ದಳು. ಒಂದು ದಿನ ಬಸ್ಸಿನ ಹಿಂದಿನ ಸೀಟಿನಲ್ಲಿ ಕೂತಿದ್ದ ಅವಳ ಬಳಿ ಬಂದ ಆರೋಪಿ ಚಂದ್ರಕಾಂತ್ ಅವಳ ಪಕ್ಕದಲ್ಲಿ ಕುಳಿತು ಅವಳಿಗೆ ಸೆಕ್ಸ್ ಬಗ್ಗೆ ಏನು ಗೊತ್ತು ಎಂದು ಕೇಳಿದ್ದ. ಈ ರೀತಿಯ ಪ್ರಶ್ನೆಗಳನ್ನು ಕೇಳಬೇಡಿ ಎಂದು ಹೇಳಿದಾಗ ಮತ್ತೆ ಮುಂದಕ್ಕೆ ಹೋದ ಆತ, ಕೆಲವು ನಿಮಿಷ ಬಿಟ್ಟು ವಾಪಸ್ ಬಂದು ಮತ್ತೆ ಅದೇ ರೀತಿ ಪಕ್ಕದಲ್ಲಿ ಕುಳಿತು ಪ್ರಶ್ನಿಸಿದ್ದ. ಆಕೆ ಏನೂ ಉತ್ತರಿಸದೆ, ತನ್ನ ಸ್ಟಾಪ್ ಬಂದಾಗ ಬಸ್ಸಿನಿಂದಿಳಿದು ಹೋದಳು ಎನ್ನಲಾಗಿದೆ.
ಬಾಲಕಿಯು ತನ್ನ ಸ್ನೇಹಿತೆಯೊಂದಿಗೆ ಬಸ್ ಕಂಡಕ್ಟರ್ನ ವರ್ತನೆ ಬಗ್ಗೆ ಹೇಳಿಕೊಂಡಳು.ನಂತರ ಸ್ನೇಹಿತೆಯಿಂದ ವಿಷಯ ತಿಳಿದ ತಾಯಿ, ಬಸ್ ಡಿಪೋಗೆ ಹೋಗಿ ಕಂಡಕ್ಟರ್ ಯಾರೆಂದು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದಳು ಎನ್ನಲಾಗಿದೆ. ಮುಂಬೈನ ನೆಹರೂ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು. ಆರೋಪಿ ಚಂದ್ರಕಾಂತ್ ಸುದಾಮ್ ಕೋಲಿ ಎಂಬಾತನನ್ನು ಪೋಕ್ಸೋ ಕಾಯ್ದೆಯ ಸೆಕ್ಷನ್ 12 ರಡಿ ಅಪರಾಧಿ ಎಂದು ತೀರ್ಮಾನಿಸಿರುವ ಕೋರ್ಟ್, ಆತನ ಮೇಲೆ 15,000 ರೂ.ಗಳ ದಂಡವನ್ನು ಕೂಡ ವಿಧಿಸಿದೆ.