120 ರೂ. ಮೀನು ಸಾಲ ನೀಡಿದ ಮಾವ ಅಳಿಯನಿಂದಲೇ ಹತ್ಯೆಯಾದ!
Wednesday, July 7, 2021
ಭೋಪಾಲ್: ಪರಿಚಯಸ್ಥರ ಅಥವಾ ಸಂಬಂಧಿಕರ ಸಾಲ ಮಾಡುವುದು ಕೊರಳಿಗೆ ಕುಣಿಕೆ ಬಿಗಿದಂತೆಯೇ, ಹಾಗಾಗಿ ಇಂತಹ ವಿಚಾರದಲ್ಲಿ ನೂರು ಬಾರಿ ವಿಚಾರಿಸಿ ಮುಂದುವರಿಯಬೇಕಾಗುತ್ತದೆ. ಈ ರೀತಿ 120 ರೂ. ಮೀನು ಸಾಲ ಪಡೆದು ಅಳಿಯನೊಬ್ಬ ಬಿಲ್ ಕಳಿಸಿರುವುದಕ್ಕೆ ಮಾವನನ್ನೇ ಕೊಲೆಗೈದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಕಳ್ಳು ಎಂಬಾತ ಫಿಶ್ ಫ್ರೈ ಮಿನಿ ಹೊಟೇಲ್ ಇರಿಸಿಕೊಂಡಿದ್ದ. ಅವನ ಅಂಗಡಿಗೆ ಪಕ್ಕದಲ್ಲೇ ಆತನ ಸೋದರ ಮಾವ ಕಯುಮ್ ಖಾನ್ ಮೀನು ಮಳಿಗೆ ಇಟ್ಟುಕೊಂಡಿದ್ದ. ಕಳ್ಳು ಯಾವಾಗಲೂ ಮಾವನಿಂದಲೇ ಮೀನು ಖರೀದಿಸಿ ತನ್ನ ಹೊಟೇಲ್ ನಲ್ಲಿ ಫ್ರೈ ಮಾಡಿ ಮಾರಾಟ ಮಾಡುತ್ತಿದ್ದ.
ಇತ್ತೀಚೆಗೆ ಮಾವನಿಂದಲೇ ಮೀನು ಖರೀದಿಸಿ 120 ರೂ. ಬಾಕಿಯಿರಿಸಿದ್ದ. ಮಾವ ಆತನಿಗೆ ಕರೆ ಮಾಡಿ ಬಾಕಿ ಇರುವ ಮೊತ್ತದ ಬಗ್ಗೆ ತಿಳಿಸಿದ್ದಾನೆ. ಯಾವಾಗಲೂ ಮೀನು ಖರೀದಿಸುವ ನನಗೇ ಮಾವ ಬಿಲ್ ಕಳುಹಿಸಿದನಲ್ಲ ಎಂಬ ಸಿಟ್ಟಿನಿಂದ ಕಳ್ಳು ಆತನೊಂದಿಗೆ ಜಗಳ ಆಡಿದ್ದಾನೆ. ಇಬ್ಬರ ಜಗಳ ತಾರಕಕ್ಕೇರಿದ್ದು, ಅಳಿಯ ಮಾವನನ್ನು ಕೊಂದೇ ಬಿಟ್ಟಿದ್ದಾನೆ. ಇದೀಗ ಕಳ್ಳು ಬಂಧನವಾಗಿದ್ದು, ಪ್ರಕರಣ ದಾಖಲಾಗಿದೆ.