ತುಳು ಸಿನಿಮಾದ ಕಾಮಿಡಿ ಸ್ಟಾರ್ ವಿಸ್ಮಯ ವಿನಾಯಕ್ ಹೊಸ ಬ್ಯುಸಿನೆಸ್- ಏನು ಗೊತ್ತಾ? (Video)
Wednesday, June 16, 2021
ಮಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಎಲ್ಲರೂ ಸಂಕಷ್ಟಕ್ಕೊಳಗಾಗಿದ್ದಾರೆ. ಹೆಚ್ಚಿನವರು ಲಾಕ್ ಡೌನ್ ಹೊಡೆತದಿಂದ ನಲುಗುತ್ತಿದ್ದರೆ, ಕೆಲವರು ಚಾಕಚಕ್ಯತೆಯಿಂದ ಲಾಕ್ ಡೌನ್ ನಲ್ಲೇ ತಮ್ಮ ಬದುಕನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಳ್ಳಲು ತೊಡಗಿದ್ದಾರೆ. ಇಂತವರಲ್ಲಿ ತುಳು ಸಿನಿಮಾ ರಂಗದ ಖ್ಯಾತ ಹಾಸ್ಯ ನಟ ವಿಸ್ಮಯ ವಿನಾಯಕ್ ಕೂಡಾ ಓರ್ವರು. ಹಾಗಾದರೆ ಇವರು ಯಾವ ರೀತಿ ಬದುಕು ಕಟ್ಟಿದ್ದಾರೆ ಅನ್ನೋದಕ್ಕೆ ಈ ಸುದ್ದಿ ನೋಡಿ.
ಹಾಸ್ಯನಟರಲ್ಲದೆ ನಿರ್ದೇಶಕ, ಬರಹಗಾರ, ಹಾಡುಗಾರ ಹೀಗೆ ವಿಭಿನ್ನ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ವಿಸ್ಮಯ ವಿನಾಯಕ್ ಅವರು ತುಳುಚಿತ್ರರಂಗದಲ್ಲಿ ಅತೀ ಬೇಡಿಕೆಯ ಕಲಾವಿದ. ಆದರೆ ಕೊರೊನಾ ಸೋಂಕಿನಿಂದ ಮೊದಲ ಲಾಕ್ ಡೌನ್ ನಿಂದ ಚಿತ್ರರಂಗ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಲು ಏನಾದರೂ ಮಾಡಿಕೊಳ್ಳಬೇಕಿತ್ತು. ಆಗ ಅವರಿಗೆ ಈ ಹಿಂದೆ ಪ್ಲ್ಯಾನ್ ಮಾಡಿಕೊಂಡಂತೆ ಹೊಟೇಲ್ ಉದ್ಯಮವನ್ನು ಶುರು ಮಾಡಬಾರದೇಕೆ ಎಂದುಕೊಂಡರು. ಅಂದುಕೊಂಡಂತೆ 'ಬಯ್ಯದ ಬಡವು'(ಸಂಜೆಯ ಹಸಿವು) ಎಂಬ ಹೊಟೇಲ್ ಆರಂಭಿಸಿಯೇ ಬಿಟ್ಟರು. ಲಾಕ್ ಡೌನ್ ನಲ್ಲಿ ಆನ್ಲೈನ್ ಹೊಟೇಲ್ ಉದ್ಯಮ ಆರಂಭಿಸಿ ಜನರ ಬಳಿಗೇ ತೆರಳಿ ಆಹಾರಗಳನ್ನು ವಿತರಣೆ ಮಾಡಿ ಲಾಕ್ ಡೌನ್ ಹೊಡೆದಿಂದ ತಪ್ಪಿಸಿಕೊಂಡರು.
ಸೋಂಕಿನ ಮೊದಲ ಅಲೆ ಮುಗಿಯುವ ಹೊತ್ತಿಗೆ ಇವರ ಕೈಯಡುಗೆಯ ರುಚಿಗೆ ಮಾರು ಹೋದ ಜನರು ಒಂದಷ್ಟು ಆರ್ಡರ್ ಕೊಡುವ, ಇವರ ಹೊಟೇಲ್ ಅನ್ನು ಗುರುತಿಸುವ ಮಟ್ಟಿಗೆ ಆದರು. ಒಳ್ಳೆಯ ಆರ್ಡರ್ ಗಳು ದೊರಕಿತು. ಹಾಗೆಯೇ ಮೊದಲ ಹಂತದ ಲಾಕ್ ಡೌನ್ ಮುಗಿಯಿತು. ಚಿತ್ರರಂಗವೂ ಸಿನಿಮಾ ನಿರ್ಮಾಣಕ್ಕೆ ತೊಡಗಲು ಆರಂಭಿಸಿತು. ವಿಸ್ಮಯ ವಿನಾಯಕರಿಗೂ ಒಂದಷ್ಟು ಕೆಲಸಗಳು ದೊರಕಲಾರಂಭಿಸಿತು. ಆದರೂ ಹೊಟೇಲ್ ಉದ್ಯಮವನ್ನು ಕೈಬಿಡದೆ ಸಂಜೆಯ ವೇಳೆಗೆ ಹೊಟೇಲ್ ನಡೆಸುತ್ತಾ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಲಾರಂಭಿಸಿದರು. ಹೊಟೇಲ್ ಉದ್ಯಮವೂ ಕುದುರಿ ಒಂದಷ್ಟು ಕಾಸು ಕೈಗೆ ಬರಲಾರಂಭಿಸಿತು.
ಆದರೆ ಮತ್ತೆ ಕೊರೊನಾ ಸೋಂಕು ಉಲ್ಬಣಗೊಂಡು, ಮತ್ತೊಮ್ಮೆ ಲಾಕ್ ಡೌನ್ ಜಾರಿಯಾಯಿತು. ವಿಸ್ಮಯ ವಿನಾಯಕ್ ಅವರು ಈ ಸಮಯವನ್ನು ಪೂರ್ಣ ಪ್ರಮಾಣ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡು, ಆನ್ಲೈನ್ ಮೂಲಕವೇ ಫುಡ್ ಡೆಲಿವರಿ ಮಾಡಿ, ಜನರಿಗೆ ಸವಿರುಚಿಯನ್ನು ಉಣಿಸುತ್ತಲೇ, ಲಾಕ್ ಡೌನ್ ಸಂಕಷ್ಟದಿಂದ ತಮ್ಮನ್ನು ತಪ್ಪಿಸಿಕೊಂಡರು.
ಈ ಬಗ್ಗೆ ಮಾತನಾಡುವ ವಿಸ್ಮಯ ವಿನಾಯಕ್ ಅವರು, ಕಳೆದ ಲಾಕ್ ಡೌನ್ ಅವಧಿಯಲ್ಲಿ ಆನ್ಲೈನ್ ಫುಡ್ ಡೆಲಿವರಿಗೆ ಜನರಿಂದ ಉತ್ತಮ ಸ್ಪಂದನೆ ದೊರಕಿತ್ತು. ಒಳ್ಳೆಯ ವ್ಯಾಪಾರ ನಡೆದಿತ್ತು. ಎರಡನೇ ಲಾಕ್ ಡೌನ್ ಅವಧಿಯಲ್ಲಿ ಹಿಂದಿನ ಬಾರಿಯಂತೆ ಜನರು ಸ್ಪಂದಿಸುತ್ತಿಲ್ಲ. ಆದರೂ ಸಂಜೆಯಿಂದ ರಾತ್ರಿ 10ರವರೆಗೆ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದರು.