
ಹೊರದೇಶಕ್ಕೂ ಯುವತಿಯರನ್ನು ಮಾರಾಟ ಮಾಡುತ್ತಿದ್ದ ಕಾಮುಕರು- ತನಿಖೆಯಿಂದ ಬಹಿರಂಗ
Saturday, June 5, 2021
ಬೆಂಗಳೂರು: ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ಹೊರದೇಶಕ್ಕೂ ಯುವತಿಯರನ್ನ ಮಾರಾಟ ಮಾಡುತ್ತಿದ್ದರು ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ಪ್ರಕರಣದ ಪ್ರಮುಖ ಆರೋಪಿ ಶೋಬೂಜ್ ತನಿಖೆಯ ವೇಳೆ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಈಗಾಗಲೇ 30-40 ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಮೊದಲು ಯುವತಿರೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಲಾಗುತ್ತದೆ. ಅದನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿತ್ತು. ಬಳಿಕ ವಿಡಿಯೋ ತೋರಿಸಿ ಬ್ಲಾಕ್ಮೇಲ್ ಮಾಡಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿತ್ತು ಎಂದು ಹೇಳಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ವೇಶ್ಯಾವಾಟಿಕೆಯೇ ಆರೋಪಿಗಳ ಮುಖ್ಯ ಕಸುಬಾಗಿದ್ದು. ಬಾಂಗ್ಲಾ ಸೇರಿದಂತೆ ಎಲ್ಲೆಲ್ಲಿಂದಲೋ ಯುವತಿಯರನ್ನು ಕರೆತಂದು ಹೈದರಾಬಾದ್, ಕೇರಳ ಮಾತ್ರವಲ್ಲದೇ ಬೆಂಗಳೂರಿನಲ್ಲಿಯೂ ವೇಶ್ಯಾವಾಟಿಕೆ ಮಾಡುತ್ತಿದ್ದರು. ಈ ದಂಧೆಯಿಂದ ಇವರಿಗೆ ದಿನವೊಂದಕ್ಕೆ ಲಕ್ಷಗಟ್ಟಲೆ ಆದಾಯ ಬರುತ್ತಿತ್ತು ಎಂದು ಆರೋಪಿಗಳು ಒಪ್ಪಿದ್ದಾರೆ.
ಅಷ್ಟೇ ಅಲ್ಲದೇ ಇನ್ನಷ್ಟು ಬೆಚ್ಚಿ ಬೀಳಿಸುವ ಮಾಹಿತಿ ಹೊರಬಿದ್ದಿದ್ದು, ಆರೋಪಿಗಳು ಹೊರ ದೇಶಗಳಿಗೂ ಭಾರತದಿಂದ ಯುವತಿಯರನ್ನು ಮಾರಾಟ ಮಾಡುತ್ತಿತ್ತು ಎನ್ನುವ ವಿಚಾರ ತನಿಖೆ ವೇಳೆ ಬಯಲಾಗಿದೆ. ಇದೀಗ ಗ್ಯಾಂಗ್ ರೇಪ್ ಕೇಸ್ ಜೊತೆಗೆ ಎಲ್ಲಾ ಆರೋಪಿಗಳ ಮೇಲೆ ಮಾನವ ಕಳ್ಳ ಸಾಗಾಣಿಕೆ ಕೇಸ್ ಕೂಡ ಪೊಲೀಸರು ಹಾಕಿದ್ದಾರೆ. ಗ್ಯಾಂಗ್ ರೇಪ್ ಕೇಸ್ ಮುಗಿದ ಕೂಡಲೇ ಮಾನವ ಕಳ್ಳ ಸಾಗಾಣಿಕೆ ಕೇಸ್ ಬಗ್ಗೆ ತನಿಖೆ ಶುರುವಾಗಲಿದೆ.
ಎಲ್ಲಾ ತನಿಖೆ ಮುಗಿದ ಬಳಿಕ ಯುವತಿಯನ್ನು ಸ್ವದೇಶಕ್ಕೆ ಕಳುಹಿಸಿಕೊಡಲಿದ್ದು, ತನಿಖೆಯ ಭಾಗವಾಗಿರುವುದರಿಂದ ಯುವತಿಯನ್ನು ಪೊಲೀಸರು ತಮ್ಮ ಭದ್ರತೆಯಲ್ಲಿಟ್ಟುಕೊಂಡ್ಡಿದ್ದಾರೆ ಎಂದು ತಿಳಿದು ಬಂದಿದೆ.