ಪ್ರಥಮ ರಾತ್ರಿಯಂದೇ ಜೋಡಿಯಿಂದ ಆತ್ಮಹತ್ಯೆಗೆ ಯತ್ನ: ಕಾರಣ ಇನ್ನೂ ತಿಳಿದಿಲ್ಲ
Tuesday, June 22, 2021
ಗೋಪಾಲ್ಗಂಜ್(ಬಿಹಾರ): ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿಯೊಂದು ಪ್ರಥಮ ರಾತ್ರಿಯಂದೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಿಹಾರದ ಗೋಪಾಲ್ಗಂಜ್ನಲ್ಲಿ ನಡೆದಿದೆ. ಜೋಡಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೋಡಿ ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದೆ ಎಂಬ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ.
ಜಮ್ಶೆಡ್‌ಪುರದ ನಿವಾಸಿ ಶಾಂತಿ ಹಾಗೂ ಗೋಪಾಲ್ಗಂಜ್ನ ಮುಖೇಶ್ ಪರಸ್ಪರ ಪ್ರೀತಿಸಿ ಥಾವೆ ದೇವಸ್ಥಾನದಲ್ಲಿ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹದ ಬಳಿಕ ವರನ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಊಟ ಮಾಡಿದ ಬಳಿಕ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಕುಟುಂಬ ಸದಸ್ಯರು ತಿಳಿಸಿರುವ ಪ್ರಕಾರ ಇಬ್ಬರು ಚಿಕನ್ ಊಟದಲ್ಲಿ ವಿಷ ಬೆರೆಸಿ ತಿಂದಿದ್ದು, ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಾರಣ ಯಾವುದೇ ರೀತಿಯ ಹೇಳಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಘಟನೆಗೆ ಸಂಬಂಧಿಸಿದಂತೆ ಎರಡು ಕುಟುಂಬದ ಸದಸ್ಯರ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.