ರಶ್ಮಿಕಾ ಮಂದಣ್ಣನನ್ನು ಹುಡುಕಿಕೊಂಡು ಬಂದ ಹುಚ್ಚು ಅಭಿಮಾನಿ: ಹಿಂದೆ ಕಳುಹಿಸಿದ ಪೊಲೀಸರು
Tuesday, June 22, 2021
ಕೊಡಗು: ನಟ-ನಟಿಯರಿಗೆ ಕೆಲವೊಬ್ಬ ಹುಚ್ಚು ಅಭಿಮಾನಿಗಳಿದ್ದು, ಅವರು ಎಂತಹ ದುಸ್ಸಾಹಸಕ್ಕೂ ಇಳಿಯುತ್ತಾರೆ. ಇಂತಹದ್ದೇ ಓರ್ವ ಹುಚ್ಚು ಅಭಿಮಾನಿಯೊಬ್ಬ ನಟಿ ರಶ್ಮಿಕಾ ಮಂದಣ್ಣರನ್ನು ಹುಡುಕಿಕೊಂಡು ತೆಲಂಗಾಣದಿಂದ ವಿರಾಜಪೇಟೆಗೆ ಬಂದಿದ್ದಾನೆ.
ಇತ್ತ ರಶ್ಮಿಕಾ ಅವರ ಮನೆಯ ವಿಳಾಸ ತಿಳಿಯದೇ ರಾತ್ರಿಯಿಡೀ ಹುಡುಕಾಡಿದ್ದಾನೆ. ವಿರಾಜಪೇಟೆಯ ಮಗ್ಗುಲ ಗ್ರಾಮಕ್ಕೆ ತೆರಳಿದ ಯುವಕ ರಶ್ಮಿಕಾ ಮನೆ ಎಲ್ಲಿ ಎಂದು ಸ್ಥಳೀಯರನ್ನು ವಿಚಾರಿಸಿದ್ದಾನೆ. ಆತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಈ ಹುಚ್ಚು ಅಭಿಮಾನಿಯನ್ನು ಕರೆದೊಯ್ದು ವಿಚಾರಿಸಿದಾಗ ತೆಲಂಗಾಣದಿಂದ ಬಂದಿರುವ ಆತನ ಹೆಸರು ಆಕಾಶ್ ತ್ರಿಪಾಠಿಯಾಗಿದೆ. ತಾನು ರಶ್ಮಿಕಾ ಮಂದಣ್ಣ ಮೇಲಿನ ಅಭಿಮಾನದಿಂದ ಆಕೆಯನ್ನು ಹುಡುಕಿಕೊಂಡು ಬಂದಿದ್ದಾಗಿ ಹೇಳಿದ್ದಾನೆ. ಆದರೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಆತನಿಗೆ ಎಚ್ಚರಿಕೆ ನೀಡಿ ವಿರಾಜಪೇಟೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ.