
ಗಡಿ ದಾಟಿದ ಪ್ರೀತಿಗೆ ಪೊಲೀಸ್ ಬಲವೂ ಅಡ್ಡಿಯಾಗಿಲ್ಲ: ಪ್ರೇಮಿಗಳ ಹೋರಾಟಕ್ಕೆ ಕೊನೆಗೂ ದಕ್ಕಿತು ನ್ಯಾಯ
Tuesday, June 22, 2021
ಭುವನೇಶ್ವರ್: ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಯುವತಿಯೋರ್ವಳ ತಂದೆ ಆಕೆಯ ಪ್ರೇಮಿಯ ವಿರುದ್ಧ ಗೋರಖ್ಪುರದಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಯುವಕನನ್ನು ಬಂಧಿಸಿ, ಯುವತಿಯನ್ನು ಮರಳಿ ಕರೆತರುವಲ್ಲಿ ಗೋರಖ್ಪುರ ಪೊಲೀಸರು ಭುವನೇಶ್ವರಕ್ಕೆ ತೆರಳಿದ್ದರು. ಆದರೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಗೋರಖ್ಪುರ ಪೊಲೀಸರು ಉತ್ತರ ಪ್ರದೇಶಕ್ಕೆ ಹಿಂತಿರುಗಿದ ಘಟನೆ ನಡೆದಿದೆ. ಈ ಮೂಲಕ ಪ್ರೇಮಿಗಳೀರ್ವರ ಪ್ರೀತಿಗೆ ಜಯ ದೊರಕಿದೆ.
ಉತ್ತರ ಪ್ರದೇಶದ ಗೋರಖ್ಪುರದ ಯುವತಿ ಆಕಾಂಕ್ಷ ಸಿಂಗ್ ಮತ್ತು ಒಡಿಶಾ ರಾಜಧಾನಿ ಭುವನೇಶ್ವರದ ಸುಂದರ್ಪದ ಏರಿಯಾದ ಪೃಥ್ವಿರಾಜ್ ಪಂಡಾ ಪರಸ್ಪರ ಪ್ರೀತಿಸುತ್ತಿದ್ದರು. ಗೋರಖ್ಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಪೃಥ್ವಿರಾಜ್ ಮತ್ತು ಆಕಾಂಕ್ಷಾಗೂ ಪರಿಚಯವಾಗಿ, ಪ್ರೀತಿ ಮೊಳೆತ್ತಿತ್ತು. ಜೂನ್ 16ರಂದು ಆಕಾಂಕ್ಷಾ ತನ್ನ ಪ್ರಿಯಕರ ಪೃಥ್ವಿರಾಜ್ ಪಂಡಾನನ್ನು ಭೇಟಿ ಮಾಡಲು ನವದೆಹಲಿ ಮಾರ್ಗವಾಗಿ ಭುವನೇಶ್ವರಕ್ಕೆ ತೆರಳಿ, ಆತನನ್ನು ಮದುವೆಯಾಗಿ ಅಲ್ಲಿಯೇ ಉಳಿದುಕೊಂಡಿದ್ದಳು.
ಇದರಿಂದ ಕುಪಿತಗೊಂಡ ಆಕಾಂಕ್ಷಾ ತಂದೆ ಗೋರಖ್ಪುರ ಠಾಣೆಯಲ್ಲಿ ಪೃಥ್ವಿರಾಜ್, ನನ್ನ ಮಗಳನ್ನು ಅಪಹರಿಸಿದ್ದಾನೆಂದು ಆರೋಪಿಸಿ ದೂರು ದಾಖಲಿಸಿದ್ದರು. ಆದ್ದರಿಂದ ಗೋರಖ್ ಪುರ ಪೊಲೀಸರು ಆಕಾಂಕ್ಷಳನ್ನು ಮರಳಿ ಕರೆತರಲು ಭುವನೇಶ್ವರಕ್ಕೆ ತೆರಳಿದ್ದರು. ಈ ವಿಚಾರ ತಿಳಿದು ಆಕಾಂಕ್ಷಾ ಏರ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನೆರವು ಕೋರಿ ಅರ್ಜಿ ಸಲ್ಲಿಸಿದ್ದಳು. ಇದು ಗೋರಖ್ಪುರ ಮತ್ತು ಭುವನೇಶ್ವರ್ ಪೊಲೀಸರ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು.
ಆಕೆ ಅಪ್ರಾಪ್ತೆಯಲ್ಲ ಎಂದು ದಾಖಲೆ ತೋರಿದ ಭುವನೇಶ್ವರ ಪೊಲೀಸರು ಆಕೆಯನ್ನು ಗೋರಖ್ಪುರ ಪೊಲೀಸರಿಗೆ ಹಸ್ತಾಂತರಿಸಲು ನಿರಾಕರಿಸಿದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಗೋರಖ್ಪರ ಪೊಲೀಸರು ಆಕೆಯನ್ನು ಕರೆದೊಯ್ಯಲೇ ಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಏನೇ ಹೇಳಿದರೂ ಕೇಳಲು ತಯಾರಲಿಲ್ಲ. ಯುವತಿ ಜತೆಯಲ್ಲಿ ಕಳುಹಿಸಿ ಎಂದು ಹಠ ಹಿಡಿದಿದ್ದರು. ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಸೆಕ್ಷನ್ 164ರ ಅಡಿಯಲ್ಲಿ ಆಕಾಂಕ್ಷಾ ನ್ಯಾಯಾಧೀಶರ ಮುಂದೆ ತನ್ನ ನಿರ್ಧಾರವನ್ನು ತಿಳಿಸಿದ್ದಳು. ಬಳಿಕ ತೀರ್ಪು ನೀಡಿದ ನ್ಯಾಯಾಲಯ ಯುವತಿಯ ಹೇಳಿಕೆ ಮತ್ತು ಆಕೆಯ ದಾಖಲೆಗಳನ್ನು ಪರಿಶೀಲಿಸಿ ಆಕೆಯ ಪರವಾಗಿಯೇ ತೀರ್ಪು ನೀಡಿತು. ಆಕಾಂಕ್ಷಾ ವಯಸ್ಕಳಾಗಿರುವುದರಿಂದ, ಅವಳು ಎಲ್ಲಿ ಬೇಕಾದರೂ ಇರಬಹುದಾಗಿದೆ ಎನ್ನುತ್ತಾ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಗೋರಖ್ಪುರ ಪೊಲೀಸರು ತೆರಳಿದ್ದಾರೆ.