ಮದುವೆಯಾಗಿ ವರುಷದೊಳಗೆ ನೇಣಿಗೆ ಕೊರಳೊಡ್ಡಿದ್ದ ಯುವತಿ!
Friday, June 11, 2021
ತುಮಕೂರು: ಮದುವೆಯಾಗಿ ಹೊಸಬಾಳಿನ ಕನಸು ಕಟ್ಟಿಕೊಂಡು ಬಾಳಬೇಕಿದ್ದ ಯುವತಿಯೋರ್ವಳು ಗಂಡನ ಮನೆಯಲ್ಲೇ ನೇಣಿಗೆ ಕೊರಳೊಡ್ಡಿರುವ ಹೃದಯ ವಿದ್ರಾವಕ ಘಟನೆ ಕುಣಿಗಲ್ ತಾಲೂಕಿನ ಕಾವೇರಿಪುರದಲ್ಲಿ ನಡೆದಿದೆ.
ಕುಣಿಗಲ್ ತಾಲೂಕಿನ ಕಾವೇರಿಪುರ ನಿವಾಸಿ ಐಶ್ವರ್ಯಾ (19) ಮೃತ ದುರ್ದೈವಿ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳಗೊಂಡ್ಲು ಗ್ರಾಮದ ಉದಯ್ ಎಂಬವರ ಪುತ್ರಿ ಐಶ್ವರ್ಯಾಳನ್ನು ಕಳೆದ ವರ್ಷ ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ಎಂಬಾತನ ಜೊತೆ ವಿವಾಹ ಮಾಡಿ ಕೊಡಲಾಗಿತ್ತು. ನಾಗರಾಜು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ದಂಪತಿ ಇಬ್ಬರೂ ತುಮಕೂರು ನಗರದ ಸರಸ್ವತಿ ಪುರಂನಲ್ಲಿ ವಾಸಿಸುತ್ತಿದ್ದರು. ಆದರೆ ಇದೇ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಐಶ್ವರ್ಯಾಳ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಪೊಲೀಸ್ ದೂರು ನೀಡಿರುವ ಐಶ್ವರ್ಯಾ ಪೋಷಕರು 'ನನ್ನ ಮಗಳಿಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಪತಿ ನಾಗರಾಜುವೇ ಐಶ್ವರ್ಯಾ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಸಿಪಿಐ ರಾಧಾಕೃಷ್ಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಶ್ವರ್ಯಾಳ ಗಂಡ ನಾಗರಾಜು ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.