ಕೊರೊನಾ ಸಂಕಷ್ಟದಿಂದ ವೈದ್ಯೆಯಾಗಬೇಕಿದ್ದ ಹುಡುಗಿ ಫುಡ್ ಡೆಲಿವರಿ ಗರ್ಲ್ ಆದಳು!
Friday, June 11, 2021
ಭುವನೇಶ್ವರ: ಕೊರೊನಾ ಸೋಂಕು ಸೃಷ್ಟಿಸಿರುವ ಸಂಕಷ್ಟವು ಹಲವರ ಜೀವನದ ಸ್ಥಿತಿಯನ್ನೇ ಬದಲು ಮಾಡಿಬಿಟ್ಟಿದೆ. ಏನೇನೋ ಕನಸುಗಳನ್ನು ಕಟ್ಟಿರುವ ಹಲವರ ಕನಸಿನಸೌಧವು ಭಗ್ನಾವಶೇಷವಾಗಿದೆ. ಅದಕ್ಕೊಂದು ಸಮರ್ಥ ನಿದರ್ಶನ ಒಡಿಶಾದ ಭಾನುಪ್ರಿಯಾ(18) ಎಂಬ ಯುವತಿಯ ಜೀವನ. ವೈದ್ಯೆಯಾಗುವ ಈಕೆಯ ಕನಸಿಗೆ ಕೊರೊನಾ ಲಾಕ್ಡೌನ್ನ ಸಂಕಷ್ಟ ಅಡ್ಡಗಾಲಿಟ್ಟಿದೆ. ಕನಸಾಗಿಯೇ ಉಳಿದಿದೆ.ಪಿಯುಸಿ ವಿದ್ಯಾರ್ಥಿನಿಯಾಗಿರುವ ಭಾನುಪ್ರಿಯಾ, ವೈದ್ಯೆಯಾಗಬೇಕೆಂಬ ಕನಸು ಕಟ್ಟಿಕೊಂಡವಳು. ಆದರೆ, ಕೊರೊನಾ ಲಾಕ್ಡೌನ್ ಆಕೆಯ ಕನಸಿಗೆ ಅಡ್ಡಿಯಾಗಿದೆ. ಚಾಲಕನಾಗಿ ನೌಕರಿ ಮಾಡುತ್ತಿದ್ದ ಆಕೆಯ ತಂದೆಯ ಕೆಲಸವನ್ನು ಲಾಕ್ಡೌನ್ ಕಸಿದುಕೊಂಡಿತು. ಉಳಿತಾಯ ಹಣ ಖಾಲಿಯಾಗುತ್ತಿದ್ದಂತೆ ಮುಂದಿನ ಜೀವನವೇ ಕುಟುಂಬಕ್ಕೆ ಕಷ್ಟವಾಗಿತ್ತು. ಒಂದು ಹೊತ್ತಿನ ಊಟಕ್ಕೂ ತತ್ವಾರವಾಯಿತು. ಇತ್ತ ತಂದೆಯ ಅಸಹಾಯಕತೆಯನ್ನು ನೋಡಿದ ಭಾನುಪ್ರಿಯಾ ತನ್ನ ವಿದ್ಯಾಭ್ಯಾಸವನ್ನು ಸ್ವಲ್ಪಕಾಲ ಪಕ್ಕಕ್ಕಿಟ್ಟು ಏನಾದರೂ ಮಾಡಬೇಕೆಂಬ ನಿರ್ಧಾರಕ್ಕೆ ಬಂದಳು. ಮೂವರು ಮಕ್ಕಳಲ್ಲಿ ಭಾನುಪ್ರಿಯಾಳೇ ಹಿರಿಯವಳು. ಕುಟುಂಬದ ಕಷ್ಟಕ್ಕೆ ಕರಗಿದ ಭಾನುಪ್ರಿಯಾ ಆನ್ಲೈನ್ ಪುಡ್ ಡೆಲಿವರಿ ಕಂಪನಿ ಜೊಮ್ಯಾಟೋಗೆ ಡೆಲಿವರಿ ಗರ್ಲ್ ಆಗಿ ಸೇರಿದಳು.ರಾತ್ರಿಯ ವೇಳೆ ನಿರ್ಜನ ರಸ್ತೆಗಳಲ್ಲಿ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುವುದು ಎಷ್ಟೊಂದು ಕಷ್ಟ ಅಂತಾ ಗೊತ್ತಿದ್ದರೂ ಕೂಡ ಅದನ್ನೆಲ್ಲ ಲೆಕ್ಕಿಸದೇ ಭಾನುಪ್ರಿಯಾ ಫುಡ್ ಡೆಲಿವರಿ ಗರ್ಲ್ ಆಗಿ ಕೆಲಸ ಆರಂಭಿಸಿಯೇ ಬಿಟ್ಟಿದ್ದಾರೆ. ಕುಟುಂಬಕ್ಕೆ ಸಹಾಯವಾಗಲು ಭಾನುಪ್ರಿಯಾ ಕಾಲೇಜನ್ನು ಸಹ ತೊರೆದಿದ್ದಾರೆ. ಕೆಲಸಕ್ಕೂ ಸೇರುವ ಮುನ್ನ ತನ್ನ ತಂದೆಯ ಬೈಕ್ ಅನ್ನು ಓಡಿಸುವುದು ಹೇಗೆಂದು ಕಲಿತುಕೊಂಡಿದ್ದಾರೆ. ಸ್ಥಳೀಯ ಜೊಮ್ಯಾಟೋ ಕಚೇರಿಗೆ ಹೋಗಿ ಇಂಟರ್ವ್ಯೂವ್ ಎದುರಿಸಿ ಡೆಲಿವರಿ ಏಜೆಂಟ್ ಆಗಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕಟಕ್ನ ಮೊದಲ ಡೆಲಿವರಿ ಗರ್ಲ್ ಹೆಸರಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಬೆಳಗ್ಗೆ 6 ಗಂಟೆಗೆ ಟ್ಯೂಷನ್ ತೆಗೆದುಕೊಳ್ಳುವ ಮೂಲಕ ಹೆಚ್ಚಿನ ದುಡುಮೆ ಮಾಡುತ್ತಿರುವ ಭಾನುಪ್ರಿಯಾ, ತನ್ನ ಶಿಕ್ಷಣವನ್ನು ಮುಂದುವರಿಸುವ ಇಂಗಿತವನ್ನು ಹೊಂದಿದ್ದಾರೆ. ಈ ಬಗ್ಗೆ ಮಾಧ್ಯಮವೊಂದರ ಬಳಿ ಮಾತನಾಡಿರುವ ಭಾನುಪ್ರಿಯಾ, ವೈದ್ಯೆಯಾಗಿ ಮಾನವೀಯ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನನ್ನ ತಂದೆ ಕೆಲಸ ಹೋದಾಗಿನಿಂದ ಜೀವನ ತುಂಬಾ ಕಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ. ನನ್ನ ತಂದೆಗೆ ನಾನು ಸೇರಿ ಮೂವರು ಹೆಣ್ಣು ಮಕ್ಕಳಿದ್ದಾರೆ. ತಂದೆಗೆ ಸಹಾಯ ಮಾಡಲು ಈ ನಿರ್ಧಾರ ತೆಗೆದುಕೊಂಡೆ. ಯಾವುದೇ ಕೆಲಸವೂ ಸಣ್ಣದಲ್ಲ. ನನ್ನ ಕುಟುಂಬಕ್ಕೆ ಸಾಧ್ಯವಾದಷ್ಟು ನೆರವಾಗುತ್ತೇನೆ. ನನ್ನ ಸಹೋದರಿಯರು ಶಿಕ್ಷಣ ಮುಂದುವರಿಸಲು ಸಹಾಯ ಮಾಡುತ್ತೇನೆ ಎಂದಿದ್ದಾರೆ.