ಟಿವಿ ನೋಡಲೆಂದು ಬರುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ
Sunday, June 20, 2021
ಶ್ರೀಕಾಕುಳಂ: ಟಿವಿ ನೋಡಲೆಂದು ಅಪ್ರಾಪ್ತೆಯನ್ನು ಮನೆಗೆ ಕರೆಯುತ್ತಿದ್ದ ಕಾಮುಕನೊಬ್ಬ ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಅನಿಲ್ (26) ಎಂಬಾತನನ್ನು ಬಂಧಿಸಲಾಗಿದೆ. ತಮ್ಮದೇ ಗ್ರಾಮದ ಬಡಕುಟುಂಬದ 7ನೇ ತರಗತಿ ವಿದ್ಯಾರ್ಥಿನಿ ತಮ್ಮ ಮನೆಯಲ್ಲಿ ಟಿವಿ ಇಲ್ಲ ಎಂದು ಪಕ್ಕದ ಮನೆಗೆ ಹೋಗಿ ಟಿವಿ ನೋಡುತ್ತಿದ್ದಳು. ಇದನ್ನು ಗಮನಿಸಿದ್ದ ಆರೋಪಿ ಅನಿಲ್ ನಮ್ಮ ಮನೆಗೆ ಬಂದರೆ ನಿನಗೆ ಇಷ್ಟವಾದ ಚಾನೆಲ್ ನೋಡಬಹುದು ಎಂದು ಆಮಿಷವೊಡ್ಡಿದ್ದಾನೆ. ಆತನ ಮಾತನ್ನು ನಂಬಿದ ಬಾಲಕಿ ಅವನ ಮನೆಗೆ ಹೋಗಲು ಆರಂಭಿಸಿದ್ದಾಳೆ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಅಪ್ರಾಪ್ತೆಯು ಗರ್ಭಿಣಿಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಕುಟುಂಬ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು , ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.