
ಮಂಗಳೂರು ವಸತಿಗೃಹದಲ್ಲಿ ಸಿಕ್ಕಿಬಿದ್ದ ಜೋಡಿ ಪ್ರಕರಣಕ್ಕೆ ಟ್ವಿಸ್ಟ್!
ಮಂಗಳೂರು: ನಗರದ ಕೆ.ಎಸ್.ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ನಿನ್ನೆ ಎರಡು ಜೋಡಿಗಳು ಸಿಕ್ಕಿಬಿದ್ದಿರುವ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದ್ದು, ಮಂಗಳೂರಿನ ಬಂದರು ಠಾಣೆಯ
ಪೊಲೀಸರು ಪೊಕ್ಸೊ ಪ್ರಕರಣ ಸಹಿತ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಿಸಿದ್ದಾರೆ.
ನಿನ್ನೆ ನಗರದ ಸಾಯಿ ಪ್ಯಾಲೇಸ್ ಹೊಟೇಲ್ ಲಾಡ್ಜ್ ನಲ್ಲಿ ಎರಡು ಪ್ರತ್ಯೇಕ ಜೋಡಿಗಳು ರೂಂ ಮಾಡಿ ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಎರಡೂ ಜೋಡಿಗಳನ್ನು ವಶಪಡಿಸಿಕೊಂಡಿದ್ದರು. ದಾಳಿ ನಡೆಸಿದ ಸಂದರ್ಭದಲ್ಲಿ ಯುವಕರು ಹಾಗೂ ಯುವತಿಯರು ಪ್ರತ್ಯೇಕ ರೂಂನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂದರು ಪೊಲೀಸರು ಜೋಡಿಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಇವರಲ್ಲಿ ಓರ್ವ ಅಪ್ರಾಪ್ತೆಯಾಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿಸಲಾಗಿದೆ. ಅಲ್ಲದೆ ಕೋವಿಡ್ ಕರ್ಫ್ಯೂ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಪ್ರಕರಣ ದಾಖಲಾಗಿದೆ.