ಕೊರೊನಾ ಇಮ್ಯುನಿಟಿ ಮಾತ್ರೆಯೆಂದು ವಿಷದ ಮಾತ್ರೆ ನೀಡಿ ಮೂವರ ಹತ್ಯೆ!
Monday, June 28, 2021
ಚೆನ್ನೈ: ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದಲ್ಲಿ ಕೊರೊನಾ ಬರದಂತೆ ತಡೆಯಬಹುದು. ಅದಕ್ಕಾಗಿ ಈ ಮಾತ್ರೆ ತಿನ್ನಿ ಎಂದು ನಕಲಿ ಆರೋಗ್ಯ ಸಿಬ್ಬಂದಿ ಕೊಟ್ಟ ಮಾತ್ರೆ ತಿಂದವರು ಇದೀಗ ಸಾವಿಗೀಡಾಗಿರುವ ಘಟನೆ ತಮಿಳುನಾಡಿನಲ್ಲಿ ಈರೋಡ್ನಲ್ಲಿ ನಡೆದಿದೆ.
ಈರೋಡ್ ನಿವಾಸಿ ಕರುಪ್ಪಂಕೌಂಡರ್ (72) ಎಂಬವರ ಮನೆಗೆ ಜೂನ್ 26ರಂದು ಶಬರಿ ಎಂಬ ನಕಲಿ ಆರೋಗ್ಯ ಸಿಬ್ಬಂದಿ ಬಂದಿದ್ದಾಳೆ. ಮನೆಯಲ್ಲಿ ಎಲ್ಲರೂ ಸೌಖ್ಯವಾಗಿರುವಿರಾ ಎಂದು ಎಂದು ವಿಚಾರಿಸಿರುವ ಆಕೆ ಕೊರೊನಾ ಸೋಂಕು ಬರದಂತೆ ಈ ಮಾತ್ರೆ ತಿನ್ನಿ, ಆಗ ನಿಮಗೆ ಇಮ್ಯುನಿಟಿ ಹೆಚ್ಚಾಗುತ್ತದೆ ಎಂದು ಹೇಳಿ ಒಂದಿಷ್ಟು ಮಾತ್ರೆ ಕೊಟ್ಟು ಹೋಗಿದ್ದಾಳೆ. ಆಕೆಯ ಮಾತನ್ನು ನಂಬಿದ ಕುಟುಂಬ ಮಾತ್ರೆ ತಿಂದಿದೆ ಹಾಗೂ ಮನೆ ಕೆಲಸದ ವ್ಯಕ್ತಿಗೂ ಮಾತ್ರೆ ಕೊಟ್ಟಿದ್ದಾರೆ. ಮಾತ್ರೆ ತಿಂದ ಸ್ವಲ್ಪ ಸಮಯದಲ್ಲಿ ಎಲ್ಲರೂ ಅಸ್ವಸ್ಥರಾಗಿ ಬಿದ್ದಿದ್ದಾರೆ.
ಅಸ್ವಸ್ಥರಾಗಿರುವ ಅವರನ್ನು ಗ್ರಾಮಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾತ್ರೆ ತಿಂದಿರುವ ಕರುಪ್ಪಂಕೌಂಡರ್ ಪತ್ನಿ ಮಲ್ಲಿಕಾ, ಮಗಳು ದೀಪಾ ಮತ್ತು ಮನೆ ಕೆಲಸದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕರುಪ್ಪಂಕೌಂಡರ್ ಸ್ಥಿತಿ ಕೂಡ ಗಂಭೀರವಾಗಿದೆ.
ಕರುಪ್ಪಂಕೌಂಡರ್ ಗೆ ಕೆಲವು ತಿಂಗಳ ಹಿಂದೆ ಆರ್ ಕಲ್ಯಾಣಸುಂದರಂ ವ್ಯಕ್ತಿಗೆ 15 ಲಕ್ಷ ರೂ. ಸಾಲ ನೀಡಿದ್ದರು. ಇತ್ತೀಚೆಗೆ ಅವರು ಆ ಹಣವನ್ನು ವಾಪಸ್ ಮಾಡುವಂತೆ ಹೇಳಿದ್ದಾರೆ. ಆದರೆ ಕಲ್ಯಾಣಸುಂದರಂಗೆ ಆ ಹಣ ವಾಪಸ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಹೇಗಾದರೂ ಮಾಡಿ ಕರುಪ್ಪಂಕೌಂಡರ್ ಕುಟುಂಬವನ್ನೇ ನಾಶ ಮಾಡಬೇಕೆಂದು ಪ್ಲಾನ್ ಮಾಡಿದ್ದಾನೆ.
ಅದಕ್ಕಾಗಿ ಶಬರಿ ಎಂಬ ನಕಲಿ ಆರೋಗ್ಯ ಸಿಬ್ಬಂದಿಯನ್ನು ಬಳಸಿಕೊಂಡು ಆಕೆಯನ್ನು ಕರುಪ್ಪಂಕೌಂಡರ್ ಮನೆಗೆ ಕಳುಹಿಸಿ ವಿಷವನ್ನೇ ಇಮ್ಯುನಿಟಿ ಮಾತ್ರೆಗಳೆಂದು ಕೊಟ್ಟು ಕೊಲೆ ಮಾಡಿಸಿದ್ದಾನೆ. ಈ ವಿಚಾರ ತನಿಖೆಯಿಂದ ಬಯಲಾಗಿದೆ. ಇದೀಗ ಪೊಲೀಸರು ಶಬರಿ ಹಾಗೂ ಕಲ್ಯಾಣಸುಂದರಂ ಅನ್ನು ಬಂಧಿಸಿದ್ದಾರೆ.