ಸಿಕ್ಕಾಪಟ್ಟೆ ಮೊಬೈಲ್ ಬಳಕೆ.. ಕೊನೆಗೆ ಅಣ್ಣನಿಂದಲೇ ಕೊಲೆಯಾದ ತಂಗಿ..!!

ತೂತುಕುಡಿ (ತಮಿಳುನಾಡು): ಅತಿಯಾದ ಮೊಬೈಲ್​ ಬಳಕೆ ಮಾಡ್ತಿದ್ದ ಸಹೋದರಿಯನ್ನ ಅಣ್ಣನೊಬ್ಬ ಕೊಲೆ ಮಾಡಿರುವ ಘಟನೆ ತೂತುಕುಡಿಯ ವಾಸವಪ್ಪಪುರಂ ಗ್ರಾಮದಲ್ಲಿ ನಡೆದಿದೆ. 

 ಕವಿತಾ(17) ಅಣ್ಣನಿಂದಲೇ ಮೃತಪಟ್ಟ ದುರ್ದೈವಿ. ಕಳೆದ ಕೆಲ ತಿಂಗಳಿಂದ ಕವಿತಾಳ ಸಹೋದರ ಮಲೈರಾಜ್ ಮೊಬೈಲ್​​ನಲ್ಲಿ ಫೇಸ್​ಬುಕ್​, ವಾಟ್ಸ್​​​ಆ್ಯಪ್​ ಬಳಕೆ ಮಾಡುತ್ತಿದ್ದಳು. ಹಾಗೂ ರಾತ್ರಿಯಿಡೀ ಗೇಮ್​ ಆಡುತ್ತಿದ್ದಳು. ಇದರಿಂದ ಆಕ್ರೋಶಗೊಂಡ ಮಲೈರಾಜ ಇನ್ನು ಮುಂದೆ ಮೊಬೈಲ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದನು. ಅಣ್ಣನ ಮಾತು ಕೇಳದ ಕವಿತಾ ತನ್ನ ಕೆಲಸ ಮುಂದುವರೆಸಿದ್ದಳು. ನಿನ್ನೆ ಸಂಜೆ ಈ ವಿಚಾರದ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕುಪಿತಗೊಂಡಿರುವ ಮಲೈರಾಜ ಕುಡುಗೋಲಿನಿಂದ ಸಹೋದರಿ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. 

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮಲೈರಾಜನನ್ನ ಬಂಧನ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ.