Mangalore ಒಂದು ಕೋಟಿವರೆಗಿನ ಮೌಲ್ಯದ ಹೈಡ್ರೋವಿಡ್ ಗಾಂಜಾ ವಶ- MBBS ವಿದ್ಯಾರ್ಥಿನಿ ಸಹಿತ ಇಬ್ಬರ ಬಂಧನ (video)
Wednesday, June 30, 2021
ಮಂಗಳೂರು: ಮಂಗಳೂರಿನಲ್ಲಿ ಹೈಡ್ರೋವೀಡ್ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ MBBS ವಿದ್ಯಾರ್ಥಿನಿ ಸಹಿತ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಕಾಸರಗೋಡಿನ ಮಂಗಲ್ಪಾಡಿಯ ಅಜ್ಮಲ್ ಟಿ. ಮತ್ತು ತಮಿಳ್ನಾಡು ಮೂಲದ ಮಿನು ರಶ್ಮಿ ಎಂದು ಗುರುತಿಸಲಾಗಿದೆ. ಮಿನು ರಶ್ಮಿ ವೈದ್ಯ ವಿದ್ಯಾರ್ಥಿನಿಯಾಗಿದ್ದಾಳೆ.
ಆರೋಪಿಗಳಿಂದ 1.236 ಹೈಡ್ರೋವೀಡ್ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು ಇದರ ಮೌಲ್ಯ 30 ಲಕ್ಷ ರೂ.ನಿಂದ 1 ಕೋ.ರೂ.ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಗಳಿಂದ 1 ಸ್ಯಾಂಟ್ರೋ ಕಾರು, 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಕಾಸರಗಾಡು ಮೂಲದ ಡಾ. ನದೀರ್ ಈ ದಂಧೆಯ ಪ್ರಮುಖ ಆರೋಪಿಯಾಗಿದ್ದಾನೆ. ವೈದ್ಯನಾಗಿರುವ ಈತ ವಿದೇಶದಲ್ಲಿದ್ದು, ತಲೆಮರೆಸಿಕೊಂಡಿದ್ದಾನೆ. ಇವನ ಸೂಚನೆಯ ಮೇರೆಗೆ ಕಾಂಞಂಗಾಡ್‌ನ ಹರಿಮಲ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಮಿನು ರಶ್ಮಿ ಮತ್ತು ಅಜ್ಮಲ್ ಎಂಬವರು ಮಂಗಳೂರು, ಉಳ್ಳಾಲ, ಕೊಣಾಜೆ, ಉಪ್ಪಳ ಪರಿಸರದ ಮಾದಕ ವ್ಯಸನಿಗಳಿಗೆ ಹೈಡ್ರೋವೀಡ್ ಗಾಂಜಾವನ್ನು ಪೂರೈಕೆ ಮಾಡುತ್ತಿದ್ದರು. ಜೂ.29ರಂದು ಅಜ್ಮಲ್ ಮತ್ತು ಮಿನು ರಶ್ಮಿ ಕಾಂಞಗಾಡ್‌ನಿಂದ ರೈಲಿನ ಮೂಲಕ ಮಂಗಳೂರಿಗೆ ಆಗಮಿಸಿ ಬಳಿಕ ಕಾರಿನಲ್ಲಿ ದೇರಳಕಟ್ಟೆಗೆ ತೆರಳಿ ಮಾರಾಟಕ್ಕೆ ಸಜ್ಜಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇಕೊನಾಮಿಕ್ ಮತ್ತು ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.