ಪತ್ನಿಯನ್ನೇ ಕೊಂದು, ಅರೆ ಸುಟ್ಟು ಸೂಟ್ಕೇಸ್ ನಲ್ಲಿ ಹಾಕಿ ಎಸೆದ ಭೂಪ...!!
Wednesday, June 30, 2021
ತಿರುಪತಿ: ಪತಿಯೇ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ಸುಟ್ಟು ಸೂಟ್ಕೇಸ್ನಲ್ಲಿ ತುಂಬಿ ಆಸ್ಪತ್ರೆಯ ಬಳಿ ಎಸೆದು ಹೋಗಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ಭುವನೇಶ್ವರಿ (27) ಪತಿಯಿಂದಲೇ ಸಾವನ್ನಪ್ಪಿದ ಮೃತ ದುರ್ದೈವಿ. ಶ್ರೀಕಾಂತ್ ರೆಡ್ಡಿ ಹಾಗೂ ಭುವನೇಶ್ವರಿ ದಂಪತಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ಖಾಸಗಿ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಭುವನೇಶ್ವರಿ ಕಳೆದ ಕೆಲ ತಿಂಗಳಿನಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಶ್ರೀಕಾಂತ್ ಕೂಡ ಮನೆಯಲ್ಲೇ ಇರುತ್ತಿದ್ದ. ಈ ಮಧ್ಯೆ ಭುವನೇಶ್ವರಿಗೆ ಕರೊನಾ ಬಂದು ಆಕೆ ಸಾವನ್ನಪ್ಪಿದ್ದಾಳೆ ಪೊಲೀಸರೇ ಅಂತ್ಯಸಂಸ್ಕಾರ ಮಾಡಿದರೆ ಎಂದು ಭುವನೇಶ್ವರಿಯ ಮನೆಗೆ ಶ್ರೀಕಾಂತ್ ತಿಳಿಸಿದ್ದ.
ಈತನ ಮಾತಿನ ಬಗ್ಗೆ ಅನುಮಾನ ಬಂದು ಭುವನೇಶ್ವರಿ ತಂದೆ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಗ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಎಸ್ವಿಆರ್ಆರ್ ಸರ್ಕಾರಿ ಆಸ್ಪತ್ರೆ ಬಳಿ ಸೂಟ್ಕೇಸ್ ಒಂದರಲ್ಲಿ ಅರ್ಧ ಬೆಂದಿದ್ದ ಮಹಿಳೆಯ ಮೃತ ದೇಹ ಸಿಕ್ಕಿದೆ. ಅದನ್ನು ಭುವನೇಶ್ವರಿ ತಂದೆ ತಾಯಿಗೆ ತೋರಿಸಿದಾಗ ಅದು ಅವರ ಮಗಳೇ ಎಂದು ಅವರು ಗುರುತಿಸಿದ್ದಾರೆ. ವಿಚಾರಣೆ ನಡೆಸಿದಾಗ ಆತನೇ ಹೆಂಡತಿಯನ್ನು ಕೊಂದಿರುವ ವಿಚಾರ ಹೊರಬಿದ್ದಿದೆ. ಇದೀಗ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.