ಮಲಗಿದಲ್ಲೇ ಪತ್ನಿಯ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಪತಿ: ಕಾರಣ ಏನು ಗೊತ್ತೇ?
Wednesday, June 23, 2021
ಆನೇಕಲ್: ಪತ್ನಿ ಅಕ್ರಮ ಸಂಬಂಧ ಇರಿಸಿಕೊಂಡಿರುವ ಅನುಮಾನದಿಂದ ಪತಿಯೇ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಳಿಮಾವು ಸಮೀಪದ ಅರಕೆರೆ ಬಿಟಿಎಸ್ ಲೇಔಟ್ ನಲ್ಲಿ ನಡೆದಿದೆ.
ಆಶಾ ಪತಿಯಿಂದಲಾಎ ಹತ್ಯೆಗೀಡಾದವರು.
ಇತ್ತೀಚಿಗೆ ಪತಿ ಮಣಿ ಮತ್ತು ಪತ್ನಿ ಆಶಾ ನಡುವೆ ಸಣ್ಣಪುಟ್ಟ ಜಗಳವಾಗುತ್ತಿತ್ತು. ಮಣಿ ಇತ್ತೀಚೆಗೆ ಹೆಚ್ಚು ಕುಡಿಯುತ್ತಿದ್ದು, ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಗಲಾಟೆ ಮಾಡುತ್ತಿದ್ದ. ಇದೀಗ ಪತ್ನಿ ಮಲಗಿದ್ದಾಗ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾನೆ. ಆಶಾ ಬೆಳಗ್ಗೆ ಮನೆಯಿಂದ ಹೊರಬಾರದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಮಣಿಯನ್ನು ಬಂಧಿಸಿದ್ದಾರೆ.
15 ವರ್ಷಗಳ ಹಿಂದೆ ಮಣಿ, ಆಶಾರ ಮದುವೆಯಾಗಿದ್ದು, ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಬಳಿಕ ಭಿನ್ನಾಭಿಪ್ರಾಯ ಮೂಡಿತ್ತು. ಮಣಿ ನಿತ್ಯ ಕುಡಿದು ಬಂದು ಆಶಾಳೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿಯು ಗಂಡನಿಂದ ದೂರಾಗಿದ್ದಳು. ಕೆಲ ದಿನಗಳ ಬಳಿಕ ಎರಡೂ ಕುಟುಂಬಗಳ ಹಿರಿಯರು ಸೇರಿ ದಂಪತಿಗೆ ಬುದ್ಧಿ ಹೇಳಿ ಒಟ್ಟಿಗೆ ವಾಸಿಸುವಂತೆ ಹೇಳಿದ್ದರು. ಬಳಿಕ ಆಶಾ, ಪತಿಯನ್ನು ಕುಡಿತದ ಚಟದಿಂದ ದೂರವಾಗಿಸಲು ರಿಹ್ಯಾಬಿಲಿಟೇಷನ್ ಸೆಂಟರ್ಗೆ ಸೇರಿಸಿದ್ದಳು. 15 ದಿನಗಳ ಕಾಲ ಚಿಕಿತ್ಸೆ ಪಡೆದು ಕಳೆದ ಮೂರು ದಿನಗಳ ಹಿಂದೆ ಮನೆಗೆ ಹಿಂದಿರುಗಿದ್ದ. ಆದರೂ ಕುಡಿತ ಮಾತ್ರ ಬಿಟ್ಟಿರಲಿಲ್ಲ.
ತಮಿಳುನಾಡಿನಿಂದ ಬಂದು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ದಂಪತಿ ದುಡಿತಕ್ಕೆ ಲಾಕ್ಡೌನ್ ಭಾರಿ ಹೊಡೆತ ಕೊಟ್ಟಿತ್ತು. ಹಾಗಾಗಿ, ಮಣಿ ಮತ್ತೆ ಆಶಾಳ ಬಳಿ ಕುಡಿತಕ್ಕೆ ಹಣ ಕೇಳೋಕೆ ಶುರು ಮಾಡಿದ. ಹಣ ಕೊಡಲು ನಿರಾಕರಿಸಿದಾಗ, ನೀನು ಬೇರೆಯವರೊಡನೆ ವಿವಾಹೇತರ ಸಂಬಂಧ ಹೊಂದಿದ್ದೀಯಾ. ಅದಕ್ಕೆ ನನಗೆ ಹಣ ಕೊಡುತ್ತಿಲ್ಲ ಎಂದು ಕಿರಿಕ್ ಮಾಡ್ತಿದ್ದನಂತೆ. ಇದೇ ವಿಚಾರವಾಗಿ ಜಗಳ ತಾರಕಕ್ಕೇರಿ ಪತಿಯು ಪತ್ನಿಯ ಹತ್ಯೆಗೈದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಮಾಹಿತಿ ನೀಡಿದ್ದಾರೆ.