
ಮತ್ತೊಂದು ಮದುವೆಯಾಗಲು ಹೊರಟ ಪತಿಯ ಗುಪ್ತಾಂಗವನ್ನೇ ಕತ್ತರಿಸಿ ಕೊಲೆಗೈದ ಪತ್ನಿ
Friday, June 25, 2021
ಮುಜಾಫರ್ನಗರ: ಮತ್ತೊಂದು ಮದುವೆಯಾಗಲು ಹೊರಟ ಪತಿಯ ಗುಪ್ತಾಂಗವನ್ನು ಪತ್ನಿಯೇ ಕತ್ತರಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ. ಈಗಾಗಲೇ ಎರಡು ಮದುವೆಯಾಗಿರುವ ಪತಿ ಮತ್ತೊಂದು ವಿವಾಹವಾಗಲು ತಯಾರು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾಳೆಂದು ಹೇಳಲಾಗಿದೆ.
ಮುಜಾಫರ್ನಗರದ ಶಿಕಾರ್‌ಪುರ ಗ್ರಾಮದಲ್ಲಿನ ಮಸೀದಿಯೊಂದರ ಮೌಲ್ವಿಯಾಗಿದ್ದ ಈತ ಬುಧವಾರ ರಾತ್ರಿ ತನ್ನ ಮನೆಯಲ್ಲಿಯೇ ರಕ್ತಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆತನ ಗುಪ್ತಾಂಗ ಸೇರಿ ದೇಹದಲ್ಲಿ ಗಾಯದ ಗುರುತುಗಳಿದ್ದವು. ಗುಪ್ತಾಂಗ ಕತ್ತರಿಸಿದ್ದರಿಂದಲೇ ಆತ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪ್ರಕರಣದ ಬೆನ್ನತ್ತಿದ ಪೊಲೀಸರು, ಪತ್ನಿಯನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಆತನಿಗೆ ತಾನು ಎರಡನೇ ಹೆಂಡತಿಯಾಗಿದ್ದು, ನಮಗೆ ಹದಿಹರೆಯದ ವಯಸ್ಸಿನ ಮಗಳಿದ್ದಾಳೆ. ಆದರೆ ಆತ ಮತ್ತೊಂದು ಮದುವೆಯಾಗುವುದಾಗಿ ಹೇಳಿ ಕಿರುಕುಳ ನೀಡುತ್ತಿದ್ದ. ಹೇಗಾದರೂ ಮಾಡಿ ಅವನು ಇನ್ನೊಬ್ಬಳನ್ನು ವರಿಸುವ ಮುನ್ನ ಮಗಳ ವಿವಾಹ ಮಾಡಬೇಕೆಂದಿದ್ದೆ. ಆದರೆ ದಿನೇ ದಿನೇ ಜಗಳ ದೊಡ್ಡದಾಗುತ್ತಾ ಹೋಗಿದ್ದು ಇದರಿಂದ ಬೇಸತ್ತು ಕೃತ್ಯ ಎಸಗಿದ್ದಾಗಿ ಆರೋಪಿ ಪತ್ನಿ ಹೇಳಿದ್ದಾಳೆ. ಸದ್ಯ ಆಕೆಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.