
ಸ್ಯಾಮ್ ಸಂಗ್ ಎಂ 42 ಸರಣಿಯ ಮೊದಲ 5ಜಿ ಫೋನ್ ಮಾರುಕಟ್ಟೆಗೆ
Friday, June 25, 2021
ಮುಂಬೈ: ಅನೇಕರ ಅಚ್ಚುಮೆಚ್ಚಿನ ಮೊಬೈಲ್ ಫೋನ್ ಬ್ರಾಂಡ್ ಸ್ಯಾಮ್ ಸಂಗ್ ನೂತನವಾಗಿ 5ಜಿ ನೆಟ್ ವರ್ಕ್ ಸೌಲಭ್ಯವಿರುವ ಮೊಬೈಲ್ ಫೋನ್ ಬಿಡುಗಡೆ ಮಾಡಲಿದೆ. ಸ್ಯಾಮ್ ಸಂಗ್‍ನ ಎಂ ಸರಣಿಯ, (ಮಧ್ಯಮ ದರ್ಜೆಯ) ಫೋನ್‍ಗಳಲ್ಲಿ 5ಜಿ ಇರುವ ಮೊದಲ ಫೋನ್ ಇದು. ಅದುವೇ ಸ್ಯಾಮ್ ಸಂಗ್ ಗೆಲಾಕ್ಸಿ ಎಂ42 5ಜಿ.
ಈ ಫೋನು ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಆವೃತ್ತಿಗೆ 22,000 ರೂ., 8 ಜಿಬಿ 128 ಜಿಬಿ ಆವೃತ್ತಿಗೆ 24000 ರೂ. ದರವಿದೆ. ಮಧ್ಯಮ ದರ್ಜೆಯ ಫೋನ್ ಗಳನ್ನು ಅತ್ಯಂತ ಆಕರ್ಷಕವಾಗಿ ಕಾಣುವಂತೆ ವಿನ್ಯಾಸ ಮಾಡುವಲ್ಲಿ ಸ್ಯಾಮ್ ಸಂಗ್ ಆಸಕ್ತಿ ವಹಿಸುತ್ತಿದೆ. ಗೆಲಾಕ್ಸಿ ಎಂ. 42ರ ಹಾರ್ಡ್ ವೇರ್ ವಿನ್ಯಾಸ ಹೆಚ್ಚಿನ ದರದ ಫೋನ್‍ಗಳನ್ನು ಹೋಲುತ್ತದೆ. ಹಿಂಬದಿ ಮತ್ತು ಫೋನಿನ ಫ್ರೇಮ್ ಪಾಲಿಕಾರ್ಬೊನೇಟ್ ಆಗಿದ್ದರೂ, ಗ್ಲಾಸ್ ಫಿನಿಶಿಂಗ್ ಬರುವಂತೆ ರೂಪಿಸಲಾಗಿದೆ. ಅಲ್ಲದೇ ಫೋನಿನ ಹಿಂಬದಿ ವಿನ್ಯಾಸವೇ ವಿಶಿಷ್ಟವಾಗಿದೆ. ನಾಲ್ಕು ಬಣ್ಣದ ಶೇಡ್‍ಗಳನ್ನು ಹಂತ ಹಂತವಾಗಿ ನೀಡಲಾಗಿದೆ.
6.6 ಇಂಚಿನ ಸೂಪರ್ ಅಮೋಲೆಡ್ ಪರದೆ ನೀಡಲಾಗಿದೆ. ಪರದೆಯ ಮೇಲ್ಭಾಗದ ಮಧ್ಯದಲ್ಲಿ ಸೆಲ್ಫಿ ಕ್ಯಾಮರಾಕ್ಕೆ ನೀರಿನ ಹನಿಯ ವಿನ್ಯಾಸ ನೀಡಲಾಗಿದೆ. ಸಾಮಾನ್ಯವಾಗಿ ಸ್ಯಾಮ್ ಸಂಗ್ ತನ್ನ ಆರಂಭಿಕ ಮತ್ತು ಮಧ್ಯಮ ದರ್ಜೆಯ ಫೋನ್‍ಗಳಲ್ಲಿ ಸ್ನಾಪ್ ಡ್ರಾಗನ್ ಪ್ರೊಸೆಸರ್ ನೀಡುವುದು ಅಪರೂಪ. ಇದರಲ್ಲಿ ಸ್ನಾಪ್‍ಡ್ರಾಗನ್ 750 ಪ್ರೊಸೆಸರ್ ನೀಡಿದೆ. ಈ ಪ್ರೊಸೆಸರ್ ಮಧ್ಯಮ ದರ್ಜೆಯಲ್ಲಿ ಹೆಚ್ಚಿನ ಸಾಮರ್ಥ್ಯದ್ದು. 30-35 ಸಾವಿರ ಬೆಲೆಯ ಫೋನ್‍ಗಳಲ್ಲೂ ಇದನ್ನು ಬಳಸಲಾಗುತ್ತದೆ.
ಇದರಲ್ಲಿ 48 ಮೆ.ಪಿ., 8 ಮೆ.ಪಿ. 5 ಮೆ.ಪಿ. ಮತ್ತು 5 ಮೆ.ಪಿ. ಲೆನ್ಸ್ ಗಳಿರುವ ನಾಲ್ಕು ಕ್ಯಾಮರಾಗಳು ಹಿಂಬದಿಯಲ್ಲಿವೆ. ಮುಂಬದಿಗೆ 20 ಮೆಗಾ ಪಿಕ್ಸಲ್ ಕ್ಯಾಮರಾ ನೀಡಲಾಗಿದೆ. ಈ ರೇಂಜಿನಲ್ಲಿ ಸ್ಯಾಮ್‍ಸಂಗ್ ಕ್ಯಾಮರಾಗಳು ನಿರಾಸೆ ಮೂಡಿಸುವುದಿಲ್ಲ. 64 ಮೆ.ಪಿ. ಕೊಟ್ಟಿದ್ದರೆ ಇನ್ನೂ ಉತ್ತಮವಾಗುತ್ತಿತ್ತು.
5000 ಎಂಎಎಚ್ ನ ದೊಡ್ಡ ಬ್ಯಾಟರಿ ಇದೆ. ಟೈಪ್ ಸಿ ಪೋರ್ಟ್ ನೀಡಲಾಗಿದೆ. ಇಷ್ಟು ದೊಡ್ಡ ಬ್ಯಾಟರಿ ಚಾರ್ಜ್ ಮಾಡಲು 15 ವ್ಯಾಟ್ಸ್ ಚಾರ್ಜರ್ ಕೊಡಲಾಗಿದೆ. ಇದರಿಂದ ಚಾರ್ಜಿಂಗ್ ನಿಧಾನ ಗತಿಯಲ್ಲಾಗುತ್ತದೆ. ಶೂನ್ಯದಿಂದ 15 ನಿಮಿಷಕ್ಕೆ ಶೇ. 12ರಷ್ಟು ಚಾರ್ಜ್ ಆಗುತ್ತದೆ. ಅರ್ಧಗಂಟೆಗೆ ಶೇ. 25ರಷ್ಟು ಚಾರ್ಜ್ ಆದರೆ. 1 ಗಂಟೆಗೆ ಶೇ. 50ರಷ್ಟು ಚಾರ್ಜ್ ಆಗುತ್ತದೆ. ಸಂಪೂರ್ಣ ಚಾರ್ಜ್ ಆಗಲು 2 ಗಂಟೆ 15 ನಿಮಿಷ ತೆಗೆದುಕೊಳ್ಳುತ್ತದೆ. ಇನ್ನೂ ವೇಗವಾಗಿ ಚಾರ್ಜ್ ಆಗಬೇಕೆಂದರೆ ಪ್ರತ್ಯೇಕವಾಗಿ 33 ವ್ಯಾಟ್ಸ್ ಚಾರ್ಜರನ್ನು ಗ್ರಾಹಕ ಖರೀದಿಸಬೇಕು.