
ಬೇರೆಜಾತಿಯವನನ್ನು ಪ್ರೀತಿಸಿದ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ತಂದೆ!
Friday, June 18, 2021
ಪಿರಿಯಾಪಟ್ಟಣ: ಬೇರೆಜಾತಿಯ ಯುವಕನನ್ನು ಪ್ರೀತಿಸಿದ್ದಾಳೆಂದು ಮಗಳನ್ನು ತಂದೆಯೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಬಳಿ ನಡೆದಿದೆ.
ಪಿರಿಯಾಪಟ್ಟಣ ನಿವಾಸಿ ಮಗಳನ್ನೇ ಹತ್ಯೆ ಮಾಡಿರುವ ಆರೋಪಿ. ಗಾಯತ್ರಿ ಹತ್ಯೆಯಾದ ಯುವತಿ.
ರಾಘವೇಂದ್ರ ಎಂಬ ಬೇರೆಜಾತಿಯ ಹುಡುಗನನ್ನು ಗಾಯತ್ರಿ ಪ್ರೀತಿಸುತ್ತಿದ್ದು, ಹೆತ್ತವರ ಮಾತಿಗೂ ಲಕ್ಷ್ಯ ನೀಡದೆ ಆತನನ್ನು ಮದುವೆಯಾಗುವೆನೆಂದು ಹಠ ಹಿಡಿದಿದ್ದಳು. ಇದರಿಂದ ಕುಪಿತಗೊಂಡ ತಂದೆ ಜಯರಾಮ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಊಟ ಕೊಡಲು ಬಂದ ಮಗಳನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಗಳನ್ನು ಕೊಲೆಗೈದ ಬಳಿಕ ಆರೋಪಿ ಜಯರಾಮ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಡಿವೈಎಸ್‌ಪಿ ರವಿಪ್ರಸಾದ್ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.