ಎಫ್ ಬಿಯಲ್ಲಿ ಚಿಗುರೊಡೆದ ಅಪ್ರಾಪ್ತರ ನಡುವಿನ ಪ್ರೇಮ ಸಂಬಂಧ: ವಿವಾಹಕ್ಕೆ ಅಡ್ಡಿಯಾಯಿತಂತೆ ಈ ಒಂದು ವಿಚಾರ?
Friday, June 18, 2021
ಧೋಲ್ಪುರ್ (ರಾಜಸ್ಥಾನ): ಎರಡು ಎಳೆಯ ಜೀವಗಳು ಫೇಸ್‌ಬುಕ್ ಮಾಯೆಯ ಲೋಕದಲ್ಲಿ ಪರಸ್ಪರ ಒಂದಾಯಿತು. ಅಲ್ಲಿಂದ ಆರಂಭವಾದ ಸಂಭಾಷಣೆ ಮುಂದಕ್ಕೆ ವಿವಾಹ ಆಗುವಲ್ಲಿವರೆಗೆ ತಲುಪಿತು. ಆದರೆ ಅಪ್ರಾಪ್ತನನ್ನು ವಿವಾಹವಾಗಲೆಂದು ಮನೆ ಬಿಟ್ಟು ಬಂದ ಅಪ್ರಾಪ್ತೆ ಕೊನೆಯ ಕ್ಷಣದಲ್ಲಿ ವಿವಾಹವಾಗಲು ಹಿಂದೇಟು ಹಾಕಿದ್ದಾಳೆ.
ಆಗ್ರಾದ ನಿವಾಸಿ ಬಾಲಕಿಯೋರ್ವಳಿಗೆ ಬಾಲಕ ಧೋಲ್ಪುರ್ ನಿವಾಸಿ ಬಾಲಕನೊಂದಿಗೆ ಎಫ್ ಬಿ ಮೂಲಕ ಪರಿಚಯವಾಗಿದೆ. ಅಪ್ರಾಪ್ತರಾದರೂ ಇಬ್ಬರೂ ಪರಸ್ಪರ ಇಷ್ಟಪಟ್ಟು, ಮದುವೆಯಾಗಲು ಬಯಸಿದ್ದರು. ಇದಕ್ಕಾಗಿ ಹುಡುಗಿ ಆಗ್ರಾದಿಂದ ಧೋಲ್ಪುರ್ಗೆ ಬಂದಿದ್ದು, ತನ್ನ ಕನಸಿನ ಹುಡುಗನನ್ನು ವರಿಸಿ ಜೀವನ ಕಟ್ಟಿಕೊಳ್ಳುವ ಬಯಕೆಯಲ್ಲಿದ್ದಳು. ಇದೇ ವೇಳೆ ಆಕೆ ತನ್ನ ಪ್ರೇಮಿಗೆ ಸಂಬಳ ಎಷ್ಟು ದೊರೆಯುತ್ತದೆ ಎಂಬ ವಿಚಾರದಲ್ಲಿ ಕೌತುಕಳಾಗಿದ್ದಳು. ಆಗ ಆತ ತನ್ನ ಸಂಬಳ 1,400 ರೂ. ಎಂದು ಹೇಳಿದ್ದಾನೆ. ಇದರಿಂದ ಬೇಸರಗೊಂಡ ಅಪ್ರಾಪ್ತೆ ವಿವಾಹವಾಗಲು ಹಿಂದೇಟು ಹಾಕಿದ್ದಾಳೆ.
ಇವರೀರ್ವರನ್ನು ಧೋಲ್ಪುರ್ ರೈಲ್ವೆ ನಿಲ್ದಾಣದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಗಿರೀಶ್ ಗುರ್ಜಾರ್ ಮತ್ತು ಬ್ರಿಜೇಶ್ ಮುಖಾರಿಯಾ ಅವರಿಬ್ಬರ ನಡವಳಿಕೆ ಕಂಡು ಅನುಮಾನಗೊಂಡಿದ್ದಾರೆ. ಬಳಿಕ ಅವರಿಬ್ಬರನ್ನೂ ವಿಚಾರಿಸಿದಾಗ ಸತ್ಯ ತಿಳಿದು ಬಂದಿದೆ. ಆದ್ದರಿಂದ ಅವರು ಬಾಲಕನನ್ನು ಅಂಬೇಡ್ಕರ್ ಹಾಸ್ಟೆಲ್ ಕೋವಿಡ್ ಸೆಂಟರ್ಗೆ ಸೇರಿಸಿದ್ದಾರೆ.
ಅದೇ ರೀತಿ, ಬಾಲಕಿಯು ತನ್ನ ತಂದೆ ಮದ್ಯಪಾನ ಮಾಡಿ ತನ್ನನ್ನು ಹೊಡೆಯುತ್ತಾನೆಂದು ತನ್ನ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಬಾಲಕಿಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ, ಆಕೆಯನ್ನು ಧೋಲ್ಪುರ್ಗೆ ಬರುವಂತೆ ತಿಳಿಸಲಾಗಿದೆ. ಕುಟುಂಬ ಸದಸ್ಯರ ಆಗಮನದ ನಂತರ, ಹೆಣ್ಣು ಮಗುವಿನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.