
ಜಗತ್ತಿನ ಮೂರನೆಯ ಅತಿದೊಡ್ಡ ವಜ್ರದ ಹರಳು ಪತ್ತೆ
Thursday, June 17, 2021
ಬೋಟ್ಸುವಾನ: ಜಗತ್ತಿನ ಮೂರನೇ ಅತಿದೊಡ್ಡ ವಜ್ರ ಎಂದು ಹೇಳಲಾಗುತ್ತಿರುವ 1098 ಕ್ಯಾರೆಟ್ ತೂಕದ ವಜ್ರದ ಹರಳನ್ನು ಪತ್ತೆ ಮಾಡಿರುವುದಾಗಿ ಪ್ರಖ್ಯಾತ ವಜ್ರ ಗಣಿಗಾರಿಕೆ ಹಾಗೂ ವ್ಯಾಪಾರಿ ಸಂಸ್ಥೆ ದೇಬಲ್ವಾನಾ ಪ್ರಕಟಿಸಿದೆ.
ಈ ಅಮೂಲ್ಯ ವಜ್ರದ ಹರಳನ್ನು ಜೂನ್ 1ರಂದು ಪತ್ತೆ ಮಾಡಿದ್ದು, ಅಧ್ಯಕ್ಷ ಮೊಗ್‍ವೀತ್ಸಿ ಮೈಸಿ ಅವರಿಗೆ ರಾಜಧಾನಿ ಗಾಬೊರೋನ್‍ನಲ್ಲಿ ಪ್ರದರ್ಶಿಸಲಾಗಿದೆ. "ಬಹುಶಃ ಇದು ವಿಶ್ವದಲ್ಲೇ ಪತ್ತೆಯಾದ ಮೂರನೇ ಅತಿದೊಡ್ಡ ಗಾತ್ರದ ವಜ್ರ" ಎಂದು ದೇಬಸ್ವಾನ ವ್ಯವಸ್ಥಾಪಕ ನಿರ್ದೇಶಕ ಲಿನೆಟ್ ಅರ್ಮ್‍ಸ್ಟ್ರಾಂಗ್ ಹೇಳಿದ್ದಾರೆ. ಇದು ಸಂಸ್ಥೆಯ ಇತಿಹಾಸದಲ್ಲೇ ಪತ್ತೆಯಾಗಿರುವ ಅತೀ ದೊಡ್ಡ ವಜ್ರದ ಹರಳು ಆಗಿದೆ. ಈ ಕಂಪನಿ ಬೋಟ್ಸುವಾನ ಸರ್ಕಾರ ಮತ್ತು ಜಾಗತಿಕ ವಜ್ರ ಕಂಪನಿಯಾದ ಡೆ ಬೀರ್ಸ್ ನಡುವಿನ ಸಹಭಾಗಿತ್ವದ ಕಂಪನಿ.
ಈಗ ಪತ್ತೆಯಾಗಿರುವ ವಜ್ರ ಮೂರನೇ ಅತಿ ದೊಡ್ಡ ವಜ್ರವಾಗಿದೆ ಎಂದು ಡೆಬ್ಸ್ವಾನಾ ಡೈಮಂಡ್ ಕಂಪನಿಯ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಲೈನೆಟ್ ಆರ್ಮ್ಸ್ಟ್ರಾಂಗ್ ಮಾಹಿತಿ ನೀಡಿದ್ದಾರೆ. ಈ ವಜ್ರದ ಬೆಲೆಯನ್ನು ಕಂಪನಿ ಸ್ಪಷ್ಟಪಡಿಸಿಲ್ಲ. ಡೆಬ್ಸ್ವಾನಾ ಡೈಮಂಡ್ ಕಂಪನಿ ಈ ವಜ್ರವನ್ನು ಮಾರಾಟ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಆರ್ಮ್ಸ್ಟ್ರಾಂಗ್ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಒಕಾವಾಂಗೋ ಕಂಪನಿ ಲಿಮಿಟೆಡ್ ಡೆಬ್ಸ್ವಾನಾ ಡೈಮಂಡ್ ಕಂಪನಿ ಅಥವಾ ಡಿ ಬೀರ್ಸ್ ಕಂಪನಿಯ ವಜ್ರಗಳನ್ನು ಕೊಳ್ಳುವ ಹಕ್ಕು ಹೊಂದಿದ್ದು, ಇನ್ನೂ ಬೆಲೆ ಗೊತ್ತುಪಡಿಸದ ಕಾರಣ ಮಾರಾಟವಾಗಿಲ್ಲ.
ವಿಶ್ವದಲ್ಲಿ ಇದುವರೆಗೆ ಪತ್ತೆಯಾಗಿರುವ ಅತಿದೊಡ್ಡದ ವಜ್ರದ ಹರಳು ಕುಲಿನನ್ 3106 ಕ್ಯಾರೆಟ್ ಇದ್ದು, ಇದು 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಎರಡನೇ ಅತಿದೊಡ್ಡ ವಜ್ರ 1109 ಕ್ಯಾರೆಟ್, ಲೆಸಿಡಿಲಾ ರೋನಾ ಟೆನಿಸ್ ಬಾಲ್ ಗಾತ್ರದ್ದಾಗಿದೆ. ಇದು 2015ರಲ್ಲಿ ಆಗ್ನೇಯ ಬೋಟ್ಸುವಾನಾದ ಕರೋವೆಯಲ್ಲಿ ಪತ್ತೆಯಾಗಿತ್ತು.