Mangalore-ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಮಂಗಳೂರಿನಲ್ಲಿ ಸರ್ಕಲ್ ನೊಳಗೊಂದು ಪುರಾತನ ಬಾವಿ ಪತ್ತೆ! (video)
Saturday, June 12, 2021
ಮಂಗಳೂರು: ಕಳೆದ ಸೆಪ್ಟೆಂಬರ್ ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಹಂಪನಕಟ್ಟೆಯಲ್ಲೊಂದು ನೂರಾರು ವರ್ಷಗಳ ಪುರಾತನ ಬಾವಿ ಪತ್ತೆಯಾಗಿತ್ತು. ಇದೀಗ ಅದೇ ರೀತಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ನಗರದ ನವಭಾರತ ಸರ್ಕಲ್ ನ ಒಳಗಡೆಯೇ ಸುಮಾರಷ್ಟು ವರ್ಷಗಳ ಹಳೆಯದಾದ ಪುರಾತನ ಬಾವಿಯೊಂದು ಪತ್ತೆಯಾಗಿ, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಈ ಬಾವಿಯು ಸುಮಾರು 75-100 ವರ್ಷಗಳ ಹಳೆಯ ಬಾವಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. 1965 ನೇ ಇಸವಿಯ ಕಾಲದಲ್ಲಿಯೇ ಈ ಬಾವಿಯನ್ನು ಮುಚ್ಚಲಾಗಿತ್ತಂತೆ. ಆದರೆ ಇದೀಗ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುತ್ತಿರುವ ವೇಳೆ ಸಿಮೆಂಟ್ ಸ್ಲ್ಯಾಬ್ ನ ಅಡಿಭಾಗದಲ್ಲಿ ಈ ಬಾವಿ ಪತ್ತೆಯಾಗಿದೆ. ಬಾವಿಯ ಸುತ್ತಲೂ ಕೆಂಪುಕಲ್ಲಿನ ಆವರಣವಿದ್ದು, ಈಗಲೂ ಉತ್ತಮ ಸ್ಥಿತಿಯಲ್ಲಿದೆ. ಸುಮಾರು 40 ಫೀಟ್ ಆಳ, 10 ಫೀಟ್ ಅಗಲವಿರುವ ಈ ಬಾವಿಯನ್ನು ಕಾಂಕ್ರಿಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿತ್ತು, ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣು ಕುಸಿದು ಬಾವಿ ಕಾಣಿಸಿಕೊಂಡಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.
ಸ್ಥಳಕ್ಕೆ ಮಂಗಳೂರು ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿದಂತೆ ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮೇಯರ್ ಪ್ರೇಮಾನಂದ ಶೆಟ್ಟಿಯವರು 'ಇದೊಂದು ಭಾರೀ ಪುರಾತನ ಬಾವಿಯಾಗಿದ್ದು, ನೀರು ಕೂಡಾ ಸ್ವಚ್ಛವಾಗಿದೆ. ನೀರಿನ ಪರಿಶುದ್ಧತೆಯ ಬಗ್ಗೆ ಇನ್ನಷ್ಟೇ ತಪಾಸಣೆಗೆ ಕಳುಹಿಸಬೇಕಾಗಿದೆ. ಈ ಬಾವಿಯ ಬಗ್ಗೆ ತಿಳಿದಿದ್ದ ಸ್ಥಳೀಯರೋರ್ವರ ಪ್ರಕಾರ ಇದೊಂದು ಸಾರ್ವಜನಿಕ ಬಾವಿಯಾಗಿದ್ದು, ಸಾಕಷ್ಟು ಕುಟುಂಬಗಳು ಆ ಕಾಲಕ್ಕೆ ಇದೇ ಬಾವಿಯನ್ನು ಅವಲಂಬಿಸಿದ್ದರಂತೆ. ಏತದಿಂದಲೂ ಈ ಬಾವಿಯಿಂದ ನೀರು ತೆಗೆಯಲಾಗುತ್ತಿತ್ತು ಎಂದು ನೆನಪಿಸುತ್ತಾರೆ. ಆದರೆ ಇದೇ ಬಾವಿಗೆ ಹಾರಿ ಕೆಲವೊಂದು ಆತ್ಮಹತ್ಯೆಗಳಾದ ಬಳಿಕ 1965ನೇ ಇಸವಿಯ ಸಂದರ್ಭ ಮುಚ್ಚಲಾಗಿದೆ ಎಂದು ಹೇಳಿದರು.
ನೀರಿನ ಬಳಕೆಗಾಗಿ ಅಲ್ಲದಿದ್ದರೂ, ಪುರಾತನ ಬಾವಿಯಾಗಿರುವುದರಿಂದ ಈ ಬಾವಿಯನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತದೆ. ಆದ್ದರಿಂದ ಸಣ್ಣದಾಗಿ ಬಾವಿಯ ಸುತ್ತಲೂ ಕಟ್ಟೆಯನ್ನು ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿಯವರು ಹೇಳಿದರು.