
ಕೇವಲ12 ರೂ.ಗೆ ಮನೆ ಆಫರ್ ಮಾಡಿದ ಸರಕಾರ: ಏಕೆ ಗೊತ್ತಾ?
ಜಾಗ್ರೆಬ್, ಕ್ರೊವೇಷಿಯಾ: 'ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಗಾದೆಯಂತೆ ಮನೆ ಕಟ್ಟೋದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇಲ್ಲೊಂದು ಕಡೆಯಲ್ಲಿ ಕೇವಲ 12 ರೂ. ಸಂಪೂರ್ಣ ನಿರ್ಮಾಣಗೊಂಡ ಮನೆಯೇ ಸಿಗುತ್ತದೆ ಎಂದರೆ ಇದಕ್ಕಿಂತ ಅಚ್ಚರಿ ಇನ್ನೇನಿದೆ. ಅಂದ ಹಾಗೆ ಸ್ವತಃ ಸರಕಾರವೇ ಈ ರೀತಿ ಪ್ರಕಟಣೆ ನೀಡಿದೆ. ಆದರೆ ಈ ಪ್ರಕಟಣೆ ಭಾರತ ಸರಕಾರದ್ದಲ್ಲ, ಬಾಲ್ಕನ್ ರಾಷ್ಟ್ರದ ಕ್ರೊವೇಷಿಯಾದಲ್ಲಿ.
ಕ್ರೊವೇಷಿಯಾದ ಕರೆನ್ಸಿ ಕುನಾ ಆಗಿದ್ದು (ಭಾರತದಲ್ಲಿ ಒಂದು ಕುನಾಗೆ 12 ರೂ.) ಒಂದು ಕುನಾಗೆ ಒಂದು ಮನೆ ಕೊಡುವುದಾಗಿ ಸರ್ಕಾರ ಘೋಷಿಸಿದೆ. ಅಂದಹಾಗೆ ಈ 12 ರೂ.ಗೆ ದೊರೆಯುವ ಮನೆಗಳಿರೋದು ಕ್ರೊವೇಷಿಯಾದ ಉತ್ತರ ಭಾಗದಲ್ಲಿರುವ ಲೆಗ್ರಾಡ್ ನಗರದಲ್ಲಿ ಮಾತ್ರ.
ಈ ರೀತಿಯಲ್ಲಿ ಸರಕಾರವೇ ಜುಜುಬಿ ಬೆಲೆಗೆ ಮನೆ ನೀಡೋದಕ್ಕೊಂದು ಕಾರಣ ಇದೆ. ಶತಮಾನದ ಹಿಂದೆ ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯ ಇಲ್ಲಿ ಆಡಳಿತ ನಡೆಸುತ್ತಿತ್ತು. ಆ ಸಾಮ್ರಾಜ್ಯ ನಶಿಸಿದ ಬಳಿಕ ಅಲ್ಲಿನ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಾ ಬಂತು. ಬಹುತೇಕರು ಅವರು ವಾಸಿಸುತ್ತಿದ್ದ ಮನೆಗಳನ್ನ ಬಿಟ್ಟು ಬೇರೆಡೆ ತೆರಳಿದ್ದರು. ಈಗ ಆ ಮನೆಗಳು ಖಾಲಿ ಉಳಿದಿವೆ. ಆದ್ದರಿಂದ ಈಗ ಇರುವ ಸರಕಾರ ಆ ಮನೆಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಆದ್ದರಿಂದ ಹೊಸ ನಿವಾಸಿಗಳನ್ನು ಆಕರ್ಷಿಸುವ ಸಲುವಾಗಿ ಈ ಆಫರ್ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಲೆಗ್ರಾಡ್ ಪಟ್ಟಣದಲ್ಲಿ ಸದ್ಯಕ್ಕೆ 2 ಸಾವಿರಕ್ಕೂ ಹೆಚ್ಚು ಮಂದಿ ವಾಸ ಮಾಡುತ್ತಿದ್ದಾರೆ. ಖಾಲಿ ಉಳಿದ ಮನೆಗಳನ್ನು ಕೊಳ್ಳಲು ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದ್ದು, 45 ವರ್ಷದೊಳಗಿನ, ಆರ್ಥಿಕವಾಗಿ ಸಬಲರಾದವರು, 15 ವರ್ಷಗಳ ಕಾಲ ವಾಸ ಮಾಡುತ್ತೇವೆ ಎಂದು ಒಪ್ಪಂದ ಮಾಡಿಕೊಳ್ಳಲು ಮುಂದಾಗುವವರಿಗೆ ಮಾತ್ರ ಮನೆಯನ್ನು ಮಾರಲಾಗುತ್ತದೆ. ಈ ಆಫರ್ಗೆ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದ್ದು, ವಿದೇಶಗಳಿಂದಲೂ ಕೂಡ ಬೇಡಿಕೆ ಬರುತ್ತಿದೆಯಂತೆ. ರಷ್ಯಾ, ಉಕ್ರೇನ್, ಟರ್ಕಿ, ಅರ್ಜೆಂಟೀನಾ ದೇಶವಾಸಿಗಳಿಂದ ಬೇಡಿಕೆ ಬರುತ್ತಿದ್ದು, ಈಗಾಗಲೇ 19 ಮನೆಗಳು ಮಾರಾಟವಾಗಿವೆಯಂತೆ.