
ಲಸಿಕೆ ಹಾಕಿಕೊಂಡವರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಸಾಬೀತು ಮಾಡಿದಲ್ಲಿ 1 ಲಕ್ಷ ರೂ. ಬಹುಮಾನ: ನರೇಂದ್ರ ನಾಯಕ್
ಮಂಗಳೂರು: ಲಸಿಕೆ ಹಾಕಿಕೊಂಡವರ ಮೈಯಲ್ಲಿ ಅಯಸ್ಕಾಂತೀಯ ಶಕ್ತಿ ಉಂಟಾಗಿದ್ದು, ಲೋಹದ ವಸ್ತುಗಳು ಅಂಟಿಕೊಳ್ಳುತ್ತಿವೆ ಎಂದು ಪ್ರಚಾರ ಮಾಡುವವರು ಸ್ಯಾನಿಟೈಸರ್ ಹಾಕಿ ದೇಹ ಒಣಗಿದ ಬಳಿಕವೂ ಲೋಹಗಳನ್ನು ಅಂಟಿಸುವ ಪ್ರಯತ್ನ ಮಾಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಸವಾಲೆಸೆದಿದ್ದಾರೆ.
ಚರ್ಮದ ಮೇಲಿನ ತೇವಾಂಶವು ಮೇಲ್ಮೈ ಒತ್ತಡದಿಂದ ದೇಹದ ಮೇಲೆ ಲೋಹದ ವಸ್ತುಗಳು ಅಂಟಿಕೊಳ್ಳುವಂತೆ ಮಾಡುತ್ತದೆ ವಿನಃ ಲಸಿಕೆ ಪಡೆದಾಕ್ಷಣ ಯಾವುದೇ ಅಯಸ್ಕಾಂತೀಯ ಶಕ್ತಿ ಉಂಟಾಗುವುದಿಲ್ಲ. ಇತ್ತೀಚಿಗೆ ಲಸಿಕೆ ಪಡೆದ ಬಳಿಕ ತನ್ನ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಉಂಟಾಗಿದೆ ಎಂದು ಪ್ರಚಾರ ಮಾಡಿದಾತ ಕಡಿಮೆ ತೂಕದ ವಸ್ತುಗಳನ್ನು ದೇಹಕ್ಕೆ ಅಂಟಿಸಿಕೊಂಡಿದ್ದಾರೆ. ಲೋಹಗಳು ಅಂದಾಕ್ಷಣ ಅದರಲ್ಲಿ ಕಾಂತತ್ವ ಇರಬೇಕೆಂದೇನೂ ಇಲ್ಲ. ಅದು ದೇಹದಲ್ಲಿನ ತೇವಾಂಶದಿಂದ ಮೇಲ್ಮೈ ಒತ್ತಡದಿಂದ ಅಂಟಿಕೊಂಡಿವೆಯೇ ಹೊರತು ಮತ್ತೇನೂ ಅಲ್ಲ. ಲಸಿಕೆ ಪಡೆದ ಬಳಿಕ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಉಂಟಾಗುತ್ತದೆ ಎನ್ನುವುದು ಮೂರ್ಖತನ ಹಾಗೂ ಬೊಗಳೆ.
ಇದು ಜನರ ದಾರಿ ತಪ್ಪಿಸಿ, ಲಸಿಕೆ ಪಡೆಯಬಾರದೆನ್ನುವ ಹುನ್ನಾರವಾಗಿದೆ. ಇದರಿಂದ ಜನರಲ್ಲಿ ಭಯ, ಭೀತಿ ಉಂಟಾಗಿ ಲಸಿಕೆ ಪಡೆಯಲು ಹಿಂಜರಿಯುವ ಪರಿಸ್ಥಿತಿ ಉಂಟಾಗಿದೆ. ಜನರು ಇಂತಹ ಮೂರ್ಖ, ಬೊಗಳೆ ಮಾತಿಗೆ ಮರುಳಾಗದೆ ಲಸಿಕೆ ಪಡೆಯಬೇಕು. ಕೋವಿಡ್ ಸೋಂಕಿನಿಂದ ಪಾರಾಗಲು ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಿಟ್ಟರೆ ಲಸಿಕೆಯೊಂದೇ ಸಾಧನ ಎಂದು ಪ್ರೊ.ನರೇಂದ್ರ ನಾಯಕ್ ಅವರು ಕರೆ ನೀಡಿದರು.