
ಈ ದೇಶದಲ್ಲಿ ಸ್ತ್ರೀಯರು ಹಲವು ಪತಿಯರನ್ನು ಹೊಂದಲು ಕಾನೂನು ರೂಪಿಸಲು ಚಿಂತನೆ....
ಪ್ರಿಟೋರಿಯಾ: ದಕ್ಷಿಣ ಆಫ್ರಿಕಾ ಗೃಹ ವ್ಯವಹಾರಗಳ ಸಚಿವಾಲಯ ಈ ಬಹುಪತಿತ್ವದ ಪ್ರಸ್ತಾಪವನ್ನು ಇಟ್ಟಿದೆ.
ದಕ್ಷಿಣ ಆಫ್ರಿಕಾದಲ್ಲಿ ಒಬ್ಬ ವ್ಯಕ್ತಿ ಬಹುಪತ್ನಿಯರನ್ನು ಹೊಂದಲು ಅನುಮತಿ ಇದೆ. ಇದಕ್ಕೆ ದಕ್ಷಿಣ ಆಫ್ರಿಕಾದಲ್ಲೇ ಅನೇಕ ಗಣ್ಯರ ವಿರೋಧವಿದ್ದರೂ, ಕಾನೂನು ಪ್ರಕಾರ ಅದು ಅಪರಾಧವಲ್ಲ ಎಂದು ಹೇಳಲಾಗಿದೆ. ಆದರೆ ಈ ರಾಷ್ಟ್ರ ಇನ್ನೊಂದು ಹೆಜ್ಜೆ ಮುಂದಿಡಲು ತೀರ್ಮಾನಿಸಿದೆ. ಬಹುಪತ್ನಿತ್ವ ಮಾತ್ರ ಇದ್ದರೆ, ಅದು ಲಿಂಗಭೇದ ಮಾಡಿದಂತಾಗುತ್ತದೆ ಎಂದು ಬಹುಪತಿತ್ವಕ್ಕೂ ಅನುಮತಿ ನೀಡಲು ಚಿಂತನೆ ನಡೆಸುತ್ತಿದೆ. ವಿವಾಹಕ್ಕೆ ಸಂಬಂಧಪಟ್ಟಂತೆ ಹೊಸ ಕಾಯ್ದೆಯನ್ನು ರಚಿಸಲು ಮುಂದಾಗಿರುವ ದಕ್ಷಿಣ ಆಫ್ರಿಕಾ ಗೃಹ ವ್ಯವಹಾರಗಳ ಸಚಿವಾಲಯ ಈ ಬಹುಪತಿತ್ವದ ಪ್ರಸ್ತಾಪವನ್ನು ಇಟ್ಟಿದೆ.
ಲಿಂಗಸಮಾನತೆ ಉತ್ತೇಜಿಸುವ ಸಲುವಾಗಿ ಬಹುಪತಿತ್ವವನ್ನೂ ಶಾಸನಬದ್ಧಗೊಳಿಸಲು ದಕ್ಷಿಣ ಆಫ್ರಿಕಾ ಚಿಂತನೆ ನಡೆಸುತ್ತಿದೆಯೆಂದು ಬಿಬಿಸಿ ವರದಿ ಮಾಡಿದೆ. ಹಾಗೇ, ಈ ಕರಡು ಪ್ರಸ್ತಾಪವನ್ನು ಸಿದ್ಧಪಡಿಸಿವುದಕ್ಕೂ ಮೊದಲು ಹಲವು ಮಾನವ ಹಕ್ಕುಗಳ ಕಾರ್ಯಕರ್ತರು, ಮತ್ತಿತರ ತಜ್ಞರನ್ನು ಸಂಪರ್ಕಿಸಿ ಸಮಾಲೋಚಿಸಲಾಗಿದೆ ಎಂದೂ ಗೃಹ ವ್ಯವಹಾರಗಳ ಇಲಾಖೆ ತಿಳಿಸಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.
ಆದರೆ ಬಹುಪತಿತ್ವ ಪ್ರಸ್ತಾವನೆಗೆ ದಕ್ಷಿಣ ಆಫ್ರಿಕಾದ ಧಾರ್ಮಿಕ ಸಂಘಟನೆಗಳು, ಸಂಪ್ರದಾಯವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅದಾಗಲೇ ಈ ದೇಶದಲ್ಲಿ ಸಲಿಂಗಿಗಳ ವಿವಾಹ, ಬಹುಪತ್ನಿತ್ವ ಕಾನೂನು ಬದ್ಧವಾಗಿ ಸಂಸ್ಕೃತಿ ನಾಶವಾಗುತ್ತಿದೆ. ಈಗ ಬಹುಪತಿತ್ವವೂ ಜಾರಿಯಾದರೆ ನಮ್ಮ ಸಂಸ್ಕಾರ, ಸಂಸ್ಕೃತಿ ಸಂಪೂರ್ಣ ಧ್ವಂಸವಾದಂತೆ ಕಿಡಿಕಾರಿದ್ದಾರೆ.