ಕನ್ನಡಕವಿಲ್ಲದೆ ಓದಲು ಆಗದ ವರ: ಮದುವೆಯನ್ನೇ ರದ್ದು ಮಾಡಿಸಿದ ವಧು
Thursday, June 24, 2021
ಲಕನೌ: ಇತ್ತೀಚೆಗೆ ಏನೇನೋ ಕಾರಣಕ್ಕೆ ಮದುವೆ ಹೆಣ್ಣು ಹುಡುಗನನ್ನು ರಿಜೆಕ್ಟ್ ಮಾಡೋದು,
ಮದುವೆಯನ್ನು ಕ್ಯಾನ್ಸಲ್ ಮಾಡೋದು ಎಲ್ಲರಿಗೂ ಗೊತ್ತೇ ಇರುವಂತದ್ದು. ಇಲ್ಲೊಂದು ಕಡೆ ವರನಿಗೆ ಕನ್ನಡಕವಿಲ್ಲದೆ ನ್ಯೂಸ್ ಪೇಪರ್ ಓದಲು ಬರುವುದಿಲ್ಲವೆಂದೇ ಮದುವೆ ಕ್ಯಾನ್ಸಲ್ ಮಾಡಿರುವ ವಿಚಿತ್ರ ಪ್ರಕರಣವೊಂದು ಉತ್ತರಪ್ರದೇಶದ ಔರೈಯಾ ಜಿಲ್ಲೆಯ ಸದರ್ ಕೊಟ್ವಾಲಿ ಪ್ರದೇಶದ ಜಮಾಲ್ಪುರ್ ಗ್ರಾಮದಲ್ಲಿ ಘಟನೆ ನಡೆದಿದೆ.
ಜಮಾಲ್ಪುರ್ ಗ್ರಾಮದ ನಿವಾಸಿ ಅರ್ಜುನ್ ಸಿಂಗ್ ಮಗಳು ಅರ್ಚನಾ ಎಂಬ ವಧುವಿಗೆ ಬನ್ಶಿ ಗ್ರಾಮದ ನಿವಾಸಿ ಶಿವಂ ಎಂಬ ವರನೊಂದಿಗೆ ಮದುವೆ ನಿಶ್ಚಯಿಸಲಾಗಿತ್ತು. ಜೂನ್ 20ರಂದು ಮದುವೆ ಮುಹೂರ್ತವನ್ನೂ ಗೊತ್ತು ಮಾಡಲಾಗಿತ್ತು. ಅದಕ್ಕೂ ಮೊದಲೇ ಶಾಸ್ತ್ರವಾಗಿ ವರನಿಗೆ ವಧುವಿನ ಕುಟುಂಬ ಮೋಟಾರ್ ಸೈಕಲ್ ಅನ್ನೂ ಉಡುಗೊರೆ ಕೊಟ್ಟಿತ್ತು. ಮದುವೆಗೆ ಮೊದಲು ಶಿವಂ ಕನ್ನಡಕ ಹಾಕಿರುವುದನ್ನು ನೋಡಿರದ ವಧುವಿನ ಕುಟುಂಬಕ್ಕೆ ಮದುವೆಯ ದಿನ ಆತ ಕನ್ನಡಕ ಹಾಕಿಕೊಂಡಿದ್ದನ್ನು ನೋಡಿ ಅನುಮಾನ ಶುರುವಾಗಿದೆ. ವರನಿಗೆ ಕಣ್ಣಿನಲ್ಲಿ ತೊಂದರೆಯಿರಬಹುದು ಎಂದು ಅನುಮಾನ ಬಂದಿದೆ. ಆತನನ್ನು ಕರೆದು ದಿನಪತ್ರಿಕೆಯನ್ನು ಕನ್ನಡಕ ಹಾಕಿಕೊಳ್ಳದೆಯೇ ಓದುವಂತೆ ಹೇಳಿದ್ದಾರೆ. ಆದರೆ ಆತ ಪೇಪರ್ ಓದುವಲ್ಲಿ ವಿಫಲನಾಗಿದ್ದಾನೆ.
ಕನ್ನಡಕ ಹಾಕದಿದ್ದರೆ ಆತನ ದೃಷ್ಟಿ ಸರಿಯಿಲ್ಲ ಎನ್ನುವ ವಿಚಾರ ವಧುವಿನ ಕುಟುಂಬಕ್ಕೆ ಆಗ ಗೊತ್ತಾಗಿದೆ. ವಿಚಾರ ತಿಳಿಯುತ್ತಿದ್ದಂತೆ ವಧು ಈ ಮದುವೆ ಆಗಲು ಸಾಧ್ಯವಿಲ್ಲ ಎಂದು ಹಠ ಹಿಡಿದು ಕುಳಿತಿದ್ದಾಳೆ. ಆಕೆಯ ಮಾತಿಗೆ ಒಪ್ಪಿದ ಆಕೆಯ ಕುಟುಂಬ ಮದುವೆ ಕ್ಯಾನ್ಸಲ್ ಮಾಡಿದೆ. ಅದಾದ ನಂತರ ತಾವು ಕೊಟ್ಟಿದ್ದ ಬೈಕ್ ಹಾಗೂ ಮದುವೆಗೆ ಖರ್ಚು ಮಾಡಿದ್ದ ಹಣವನ್ನು ವಾಪಸು ಕೊಡಬೇಕೆಂದು ಕೇಳಿದೆ. ಅದಕ್ಕೆ ವರನ ಕುಟುಂಬ ಒಪ್ಪದ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.