
ವಿಮಾನದಲ್ಲಿ ಸೀಟ್ ಹಿಂದಿನಿಂದ ಕೈ ತೂರಿಸಿ ದೇಹ ಸ್ಪರ್ಶಿಸಿ ಕಿರುಕುಳ; ವೀಡಿಯೋ ಮಾಡಿ ಟಿಕ್ ಟಾಕ್ ನಲ್ಲಿ ಹರಿಯಬಿಟ್ಟ ಯುವತಿ
ನವದೆಹಲಿ: ವಿಮಾನದಲ್ಲಿ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು 18ರ ಯುವತಿಯೋರ್ವಳು ಅದರ ವೀಡಿಯೋ ಮಾಡಿ ಟಿಕ್ ಟಾಕ್ ನಲ್ಲಿ ವೈರಲ್ ಮಾಡಿದ್ದಾಳೆ.
ತನಗೆ ಲೈಂಗಿಕ ಕಿರುಕುಳ ನೀಡಿದಾತ ಹೆಚ್ಚೂ ಕಡಿಮೆ ಐವತ್ತು ವರ್ಷ ಇರಬಹುದು ಎಂದು ಯುವತಿಯೇ ಹೇಳಿಕೊಂಡಿದ್ದು, ಬೆಳ್ಳಂಬೆಳಗ್ಗೆಯೇ ಇಂಥದ್ದೊಂದು ಅಪಸವ್ಯ ನಡೆದಿದೆ. ಸುಮಾರು ಒಂದು ಗಂಟೆ ಕಾಲ ನಾನು ಮುಜುಗರವನ್ನು ಅನುಭವಿಸಬೇಕಾಯಿತು. ಇಷ್ಟಾದರೂ ಅಲ್ಲಿದ್ದ ಯಾರೂ ನನ್ನ ಬೆಂಬಲಕ್ಕೆ ಬರಲಿಲ್ಲ ಎಂಬುದಾಗಿ ಯುವತಿ ಹೇಳಿಕೊಂಡಿದ್ದಾಳೆ.
ನಾನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಸೀಟ್ನಲ್ಲಿ ಕುಳಿತು ಪುಸ್ತಕ ಓದುತ್ತಿದ್ದಾಗ ಮೈಮೇಲೆ ಏನೋ ಸರಿದಾಡಿದಂತಾಯಿತು. ಏನು ಎಂದು ಗಮನಿಸಿದಾಗ ವ್ಯಕ್ತಿಯೊಬ್ಬ ಎದೆಯನ್ನು ಮುಟ್ಟಲು ಪ್ರಯತ್ನಿಸುತ್ತಿರುವುದು ತಿಳಿಯಿತು. ನಾನು ನನ್ನ ಕೈಯನ್ನು ಮುಂದೆ ಒಡ್ಡಿದಾಗ, ನನ್ನ ಬೆರಳ ತುದಿಗಳು ಅವನ ಬೆರಳ ತುದಿಗಳಿಗೆ ತಾಗಿದವು. ಏನಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ ಎಂಬುದನ್ನು ಇದರಿಂದ ಆತ ತಿಳಿದು ಸುಮ್ಮನಾಗುತ್ತಾನೆಂದು ಅಂದುಕೊಂಡಿದ್ದೆ. ಆದರೆ ಕೆಲವೇ ನಿಮಿಷಗಳಲ್ಲಿ ಆತ ಮತ್ತೆ ಅದೇ ಥರ ಕೈತೂರಿ ಎದೆ ಸ್ಪರ್ಶಿಸಲು ಹವಣಿಸುತ್ತಿದ್ದ. ಆತ ನನ್ನನ್ನು ಸ್ಪರ್ಶಿಸುವ ಪ್ರಯತ್ನ ಒಂದು ಹಂತದ ಬಳಿಕ ನಾನು ಪ್ರತಿಯೊಂದನ್ನೂ ವೀಡಿಯೋ ರೆಕಾರ್ಡ್ ಮಾಡಿಕೊಂಡೆ. ಅಲ್ಲದೆ ವಿಷಯವನ್ನು ಅಲ್ಲಿದ್ದ ವೈಮಾನಿಕ ಸಿಬ್ಬಂದಿಗೆ ತಿಳಿಸಿದೆ. ಅವರಿಗೆ ಇದೆಲ್ಲ ಕಾಣಿಸುತ್ತಿದ್ದರೂ ನೋಡಿಯೂ ನೋಡದಂತೆ ಇದ್ದರು. ಸಹ ಪ್ರಯಾಣಿಕರು ಕೂಡ ನನ್ನ ಬೆಂಬಲಕ್ಕೆ ಬರಲಿಲ್ಲ. ಕೊನೆಗೆ ವಿಂಡೋಸೀಟ್ ಬಯಸುತ್ತಿದ್ದ ಇನ್ನೊಬ್ಬಾಕೆಯನ್ನು ಅಲ್ಲಿ ಕೂರಿಸಿ ಆಕೆಯ ಸೀಟಲ್ಲಿ ಕುಳಿತೆ. ಈ ವಿಷಯದ ವಿರುದ್ಧ ನಾನು ಅಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರೂ ಉಳಿದವರು ನನಗೇ ಸುಮ್ಮನಿರುವಂತೆ ಹೇಳಿದರು ಎಂದು ಬೇಸರದಿಂದ ಹೇಳಿಕೊಂಡಿದ್ದಾಳೆ.
ವಾರದ ಹಿಂದೆ ನಡೆದಿರುವ ಇವೆಲ್ಲವನ್ನೂ ಯುವತಿ ಬುಧವಾರ ಟಿಕ್ಟಾಕ್ನಲ್ಲಿ @mobilesushibar ಎಂಬ ಯೂಸರ್ನೇಮ್ ಇರುವ ಖಾತೆಯಲ್ಲಿ ವೀಡಿಯೋ ಮೂಲಕ ಹಂಚಿಕೊಂಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಯುವತಿಗೆ ತಮ್ಮ ಬೆಂಬಲ ಸೂಚಿಸಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆಲವರಂತೂ ಆತನ ಬೆರಳನ್ನೇ ಕತ್ತರಿಸಬೇಕು ಎಂದು ತೀವ್ರ ಕೋಪ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಯುವತಿ ಸ್ಪಿರಿಟ್ ಏರ್ಲೈನ್ಸ್ನಲ್ಲಿ ಕ್ಯಾಲಿಫೋರ್ನಿಯಾಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಈ ಬಗ್ಗೆ ದೂರು ನೀಡಿದ್ದು, ಏರ್ಲೈನ್ಸ್ನವರು ತನಿಖೆ ನಡೆಸುತ್ತಿದ್ದಾರೆ. ಅವರು ಆತನನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಇದ್ದೇನೆ ಎಂಬುದಾಗಿಯೂ ಯುವತಿ ಹೇಳಿದ್ದಾಳೆ.