Mangalore; ನೆರವು ನೀಡುವ ನೆಪದಲ್ಲಿ ಅಪ್ರಾಪ್ತೆಯ ಅತ್ಯಾಚಾರ
Saturday, June 19, 2021
ಮಂಗಳೂರು: ನೆರವು ನೀಡುವ ನೆಪದಲ್ಲಿ ವ್ಯಕ್ತಿಯೋರ್ವನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2021 ಜೂನ್ 11ರಂದು ಅಪ್ರಾಪ್ತ ಬಾಲಕಿ ಅಸೌಖ್ಯದ ನಿಮಿತ್ತ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಮರುದಿನ ಅಲ್ಲಿಂದ ಜ್ಯೋತಿ ಕೆಎಂಸಿಗೆ ಆಸ್ಪತ್ರೆಗೆ ತೆರಳುವ ಸಂದರ್ಭ ರೈಲ್ವೆ ಸ್ಟೇಷನ್ ಬಳಿ ಇದ್ದ ಆರೋಪಿ ಅಜ್ಮಲ್ ಎಂಬಾತನ ರಿಕ್ಷಾದಲ್ಲಿ ಹೋಗಿದ್ದಾಳೆ. ಈ ಸಂದರ್ಭ ಅಪ್ರಾಪ್ತ ಬಾಲಕಿಯ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಆಕೆಯ ಫೊನ್ ನಂಬರನ್ನು ಪಡೆದುಕೊಂಡಿದ್ದಾನೆ.
ಜೂನ್ 16ರಂದು ಅಪ್ರಾಪ್ತ ನೊಂದ ಬಾಲಕಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಆರೋಪಿ ಅಜ್ಮಲ್, ಅನ್ಸಾರಿ ರಸ್ತೆಯ ತನ್ನ ಪರಿಚಯದ ಬಬ್ಲು ಎಂಬವರ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾನೆ. ಬಳಿಕ ಜೂನ್ 17ರಂದು ಮದೀನಾ ಮಸೀದಿ ಮುಂಭಾಗದ ಹನೀಫ್ ಎಂಬವರ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ರಾತ್ರಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾನೆ.
ಅಲ್ಲದೆ ಈ ಬಗ್ಗೆ ಯಾರಲ್ಲಿಯಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಎಂದು ದೂರಿನಲ್ಲಿ ಬಾಲಕಿ ತಿಳಿಸಿದ್ದಾಳೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.