Mangalore- ತಂಗಿಯ ವಿಚಾರಕ್ಕೆ ಬರಬೇಡ ಎಂದು ಅಣ್ಣನ ಎಚ್ಚರಿಕೆ- ಕುಡ್ಲದಲ್ಲಿ ನಡೆಯಿತು ರೌಡಿಸಂ!
Wednesday, June 2, 2021
ಮಂಗಳೂರು: ಯುವತಿಯ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯೊಂದಕ್ಕೆ ನುಗ್ಗಿ ತಲವಾರು ದಾಳಿ ನಡೆಸಲು ಪ್ರಯತ್ನಿಸಿದ ಆರೋಪದ ಮೇಲೆ ರೌಡಿಶೀಟರ್ ಗಳ ಸಹಿತ ಏಳು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೋಡಿಕಲ್ ನಿವಾಸಿ ರಂಜಿತ್(28), ಉರ್ವಸ್ಟೋರ್, ಸುಂಕದಕಟ್ಟೆ ನಿವಾಸಿಗಳಾದ ಅವಿನಾಶ್(23), ಧನುಷ್(19), ಕೊಟ್ಟಾರ ಚೌಕಿ ಲೋಬೊ ರೋಡ್ ನಿವಾಸಿ ಪ್ರಜ್ವಲ್(24), ಕೋಡಿ ಬೆಂಗ್ರೆ ನಿವಾಸಿ ದೀಕ್ಷಿತ್(21), ಬಂಟ್ವಾಳ ತಾಲೂಕು ಬಾರೆಕಾಡು ನಿವಾಸಿ ಹೇಮಂತ್(19), ಕುಂಜತ್ ಬೈಲ್ ನಿವಾಸಿ ಯತಿರಾಜ್(23) ಬಂಧಿತರು
ಆರೋಪಿಗಳಲ್ಲಿ ಹೇಮಂತ್ ಎಂಬಾತ ಶಕ್ತಿನಗರ ಎಂಬಲ್ಲಿನ ಯುವತಿಗೆ ಮದುವೆ ಆಗುತ್ತೇನೆಂದು ತೊಂದರೆ ಮಾಡುತ್ತಿದ್ದ, ಈ ಹಿನ್ನೆಲೆಯಲ್ಲಿ ಆಕೆಯ ಅಣ್ಣಂದಿರು ಆಕೆಯ ವಿಚಾರಕ್ಕೆ ಬರಬಾರದೆಂದು ಎಚ್ಚರಿಕೆ ನೀಡಿದ್ದರು. ಆದ್ದರಿಂದ ಆತ ತನ್ನ ಸ್ನೇಹಿತರೊಂದಿಗೆ ಮೇ 30ರಂದು ರಾತ್ರಿ 8ಗಂಟೆಗೆ ಯುವತಿಯ ಮನೆಗೆ ಹೋಗಿ ದಾಂಧಲೆ ನಡೆಸಿದ್ದಾನೆ. ಜೊತೆಗೆ ಆರೋಪಿಗಳು ಮನೆಯ ಟಿವಿ, ಮಿಕ್ಸಿ, ಸೋಫಾ ಹಿಂದಿನ ಬಾಗಿಲುಗಳನ್ನು ರಾಡ್ ಗಳಿಂದ ಒಡೆದು ಪುಡಿಗೈದಿದ್ದಾರೆ. ಬಳಿಕ ಯುವತಿಯ ತಾಯಿಯ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ. ಆಕೆ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದು ಬೊಬ್ಬೆ ಹೊಡೆದ ಪರಿಣಾಮ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿ, ಮಾರಕಾಸ್ತ್ರ ಹಾಗೂ ಕೃತ್ಯಕ್ಕೆ ಬಳಸಿರುವ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.