ಸತ್ತ ತಿಮಿಂಗಿಲ ಮೀನೊಂದು ಯೆಮನ್ ನ 35 ಮೀನುಗಾರರ ಬದುಕನ್ನೇ ಬದಲಿಸಿತು!
Thursday, June 3, 2021
ಸನಾ (ಯೆಮೆನ್): ಸಾಗರದಾಳದ ದೈತ್ಯ ಮೀನು ತಿಮಿಂಗಿಲ ತಿಂದು ಉಗಿದ ವಸ್ತುವು ಸಹ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ ಎಂದರೆ ನೀವು ನಂಬಲೇ ಬೇಕು. ಹೌದು ಸಮುದ್ರದಲ್ಲಿ ತೇಲುತ್ತಿದ್ದ ತಿಮಿಂಗಿಲದ ವಾಂತಿಯು ಯೆಮೆನ್ನ ಸಮುದ್ರದಲ್ಲಿ ಮೀನುಗಾರರ ಗುಂಪಿಗೆ ದೊರಕಿದೆ.
ಈ ಮೀನುಗಾರರಿಗೆ ವೀರ್ಯ ತಿಮಿಂಗಿಲ (ಸ್ಪರ್ಮ್ ವೇಲ್) ದ ಕಳೇಬರ ದೊರಕಿದ್ದು, ಅದರ ಒಳಗೆ ಬೆಲೆಬಾಳುವ ಮೀನಿನ ವಾಂತಿಯನ್ನು ಪತ್ತೆಹಚ್ಚಿದ್ದಾರೆ. ಅದರ ವಾಂತಿಯು ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತದೆ. ಅತಿ ಬಡರಾಷ್ಟ್ರಗಳಲ್ಲಿ ಯೆಮೆನ್ ಸಹ ಒಂದು. ಜೀವನ ಸಾಗಿಸಲು ಇಲ್ಲಿ ಮೀನುಗಾರಿಕೆಯನ್ನೇ ಅವಲಂಬಿಸಲಾಗುತ್ತದೆ.
ದಕ್ಷಿಣ ಯೆಮನ್‌ನ ಗಲ್ಫ್ ಆಫ್ ಅಡೆನ್ ನೀರಿನಲ್ಲಿ ದೋಣಿ ನಡೆಸುವಾಗ ದೈತ್ಯ ತಿಮಿಂಗಿಲವನ್ನು ಗುರುತಿಸಿದ 35 ಮೀನುಗಾರರಿಗೆ ತಿಮಿಂಗಿಲ ವಾಂತಿ ಪತ್ತೆಯಾಗಿದೆ. ಸಿರಿಯಾದ ಮೀನುಗಾರನೊಬ್ಬ ಮೊದಲು ದೈತ್ಯ ತಿಮಿಂಗಿಲದ ಕಳೇಬರವನ್ನು ಗುರುತಿಸಿದ್ದಾನೆ. ಅವನು ಎಲ್ಲರಿಗೂ ಅದರ ಒಳಗೆ ವಾಂತಿ ಇರಬಹುದು ಎಂಬುದನ್ನು ತಿಳಿಸಿದ್ದಾನೆ. ಬಳಿಕ ಅವರು ದೈತ್ಯ ತಿಮಿಂಗಲದ ಮೃತದೇಹದ ಸಮೀಪ ಬಂದು ಅದರ ಮಲದ ವಾಸನೆಯನ್ನು ಗಮನಿಸಿದ್ದಾರೆ. ಅದರ ವಾಸನೆಯಿಂದಲೇ ಹೊಟ್ಟೆಯೊಳಗೆ ಏನಾದರೂ ಇದೆ ಎಂದು ಊಹಿಸಿದ ಬಳಿಕ ಮೀನುಗಾರರು ಸತ್ತ ತಿಮಿಂಗಿಲದ ಕಳೇಬರವನ್ನು ಸಮುದ್ರದ ದಡಕ್ಕೆ ಎಳೆದೊಯ್ದಿದ್ದಾರೆ.
ಇದಾದ ಬಳಿಕ ಮೀನುಗಾರರು ಕಳೇಬರವನ್ನು ಕತ್ತರಿಸಿ ನೋಡಿದಾ 127 ಕೆಜಿ ಉಂಡೆಯ ಕಪ್ಪು ವಾಂತಿ ಪತ್ತೆಯಗಿದೆ. ಇದನ್ನು ಕಂಡು ಎಲ್ಲರು ಆಶ್ಚರ್ಯಚಕಿತರಾದರು. ಸುಮಾರು 1.5 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ 10 ಕೋಟಿ ರೂ. ಮೌಲ್ಯದ ನಿಧಿಯನ್ನು ನಿಜಕ್ಕೂ ಕುಣಿದು ಕುಪ್ಪಳಿಸಿದ್ದಾರೆ.
ಸಾಮಾನ್ಯವಾಗಿ “ಸಮುದ್ರದ ನಿಧಿ” ಅಥವಾ “ತೇಲುವ ಚಿನ್ನ” ಎಂದು ಕರೆಯಲ್ಪಡುವ ತಿಮಿಂಗಿಲದ ವಾಂತಿಯು ಒಂದು ಘನ ಮೇಣದ ಸುಡುವ ವಸ್ತುವಾಗಿದೆ. ಸ್ಪರ್ಮ್ ವೇಲ್ ಅಥವಾ ಕ್ಯಾಚಲೋಟ್ ಹಲ್ಲಿನ ತಿಮಿಂಗಿಲಗಳಲ್ಲಿ ಇದು ಕಂಡುಬರುತ್ತವೆ. ಅವು ಕಪ್ಪೆ ಬೊಂಡಾಸ್, ಮಣಕಿ ಎಂದು ಕರೆಯುವ ಮೀನುಗಳನ್ನು ತಿಂದು ಬದುಕುತ್ತವೆ. ಅವು ತಿನ್ನುವ ಮೀನುಗಳಿಗೆ ಅತಿ ಗಟ್ಟಿಯಾದ ಮೂಳೆಗಳಿರುತ್ತವೆ. ಅವುಗಳನ್ನು ಕರಗಿಸಲು ಕಷ್ಟವಾದ್ದರಿಂದ ತಿಮಿಂಗಿಲ ಅದನ್ನು ಜಗಿದು, ಜಗಿದು ಉಗಿಯುತ್ತದೆ. ಉಗಿದ ತಕ್ಷಣ ವಾಂತಿಯು ವಿಪರೀತ ವಾಸನೆ ಬರುತ್ತದೆ. ಕೆಲ ದಿನಗಳ ನಂತರ ಅದು ಘಟ್ಟಿಯಾಗಿ ಸುವಾಸನೆ ಬೀರಲಾರಂಭಿಸುತ್ತದೆ. ಸುಗಂಧ ದ್ರವ್ಯಗಳನ್ನು ತಯಾರಿಸಲು ಪಾಶ್ಚಿಮಾತ್ಯ ದೇಶಗಳಲ್ಲಿ ಈ ತಿಮಿಂಗಿಲಗಳ ವಾಂತಿಯನಯ ಬಳಸಲಾಗುತ್ತದೆ. ಒಂದು ಕೆ.ಜಿ. ವಾಂತಿಗೆ ಸುಮಾರು 1 ಕೋಟಿ ರೂಪಾಯಿ ಬೆಲೆ ಇದೆ.
ಈ ಬಗ್ಗೆ ಬಿಬಿಸಿ ಮಾಧ್ಯಮದೊಂದಿಗೆ ಮಾತನಾಡಿರುವ ಮೀನುಗಾರನೊಬ್ಬ “ನಿಜಕ್ಕೂ ಇದು ಊಹಿಸಲಾಗದ ಮೊತ್ತವಾಗಿದ್ದು, ನಾವೆಲ್ಲರೂ ಬಡವರಾಗಿದ್ದೇವೆ. ಈ ವಸ್ತುವು ನಮಗೆ ಇಷ್ಟು ದೊಡ್ಡ ಮೊತ್ತವನ್ನು ನೀಡುತ್ತದೆ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ ಎಂದು ತಿಳಿಸಿದರು.