ಸದಾ ಕುಡಿತದಲ್ಲಿಯೇ ಮುಳುಗಿದ್ದ ವರನನ್ನು ಬೇಡ ಎಂದು ಮದುವೆ ಮುರಿದ ವಧು
Tuesday, June 8, 2021
ಲಕ್ನೋ: ಮದುವೆ ಸಂಭ್ರಮದಲ್ಲಿ ಸ್ನೇಹಿತರ ಜೊತೆ ಸೇರಿ ಕಂಠಪೂರ್ತಿ ಕುಡಿದು ಮೋಜಿ ಮಸ್ತಿಯಲ್ಲಿ ತೊಡಗಿದ್ದ ವರನನ್ನು ಮದುವೆಯಾಗೋದಿಲ್ಲ ಎಂದು ವಧು ಮದುವೆಯನ್ನೇ ರದ್ದು ಮಾಡಿದ ಘಟನೆ ಲಕ್ನೋದ ಪ್ರಯಾಗ್‌ರಾಜ್‌ನ ಪ್ರತಾಪ್‌ಘರ್ ಬಳಿಯ ಟೆಕ್ರಿ ಎಂಬ ಹಳ್ಳಿಯಲ್ಲಿ ನಡೆದಿದೆ.
ಯುವತಿಯ ತಂದೆ ರೈತನಾದ್ದರೂ ಮಗಳ ಮದುವೆಯನ್ನು ಚೆನ್ನಾಗಿಯೇ ಮಾಡಿಕೊಡುತ್ತಿದ್ದರು. ಆದರೆ ಮದುವೆ ಸಮಾರಂಭ ಆರಂಭವಾದಾಗಿನಿಂದಲೂ ವರ ಹಾಗೂ ಆತನ ಸ್ನೇಹಿತರು ಯಾವಾಗಲೂ ಕುಡಿತದ ಅಮಲಿನಲ್ಲಿಯೇ ಇರುತ್ತಿದ್ದರು.
ಇದನ್ನು ಯುವತಿ ಕೆಲ ಸಮಯ ಸಹಿಸಿಕೊಂಡಿದ್ದಳು. ಆದರೆ ವರ ಹಾಗೂ ಆತನ ಸ್ನೇಹಿತರು ಕಂಠಪೂರ್ತಿ ಕುಡಿದು ವಧುವಿಗೆ ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದಾರೆ. ಆಕೆ ಕುಣಿಯಲು ಒಪ್ಪಲಿಲ್ಲದಿದ್ದಾಗ, ‘ಮದುವೆಯಾಗುವ ಹೆಣ್ಣು ಈಗಲೇ ನನ್ನ ಮಾತು ಕೇಳುತ್ತಿಲ್ಲ’ ಎಂದು ಕೂಗಾಡಿದ್ದಾನೆ. ಇದರಿಂದ ಬೇಸತ್ತ ವಧು ಮದುವೆಯೇ ಬೇಡ ಎಂದು ನಿಲ್ಲಿಸಿದ್ದಾಳೆ. ಮನೆಯವರಿಗೆ ಶಾಕ್ ಆದರೂ ಆಕೆ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ.