
ಲಸಿಕೆ ಹಾಕುವಾಗ ನರ್ಸ್ ಎಡವಟ್ಟು : ಮುಂದೇನಾಯಿತು ನೀವೇ ನೋಡಿ
Friday, June 11, 2021
ಲಖನೌ: ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ರಾವರ್ಪುರದ ನರ್ಸಿಂಗ್ ಹೋಂನಲ್ಲಿ ನರ್ಸ್ ಯಾವುದೋ ಮೂಡ್‌ನಲ್ಲಿ ಎರಡೂ ಡೋಸ್ ಒಟ್ಟಿಗೆ ಕೊಟ್ಟು ಬಿಟ್ಟು ಎಡವಟ್ಟು ಮಾಡಿದ್ದಾರೆ.
ಲಸಿಕೆ ಹಾಕುವಾಗ ಮಾತುಕತೆಯಲ್ಲಿ ನಿರತರಾಗಿದ್ದ ನರ್ಸ್ ಐದು ನಿಮಿಷಗಳ ಅಂತರದಲ್ಲೇ ಎರಡೂ ಡೋಸ್ ಒಟ್ಟಿಗೆ ಕೊಟ್ಟು ಬಿಟ್ಟು ಎಡವಟ್ಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಲಸಿಕೆ ಹಾಕಿಸಿಕೊಂಡು ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ನಂತರ ಮನೆಯವರು ಕಂಗಾಲಾಗಿದ್ದಾರೆ. ಆಗ ಅವರಿಗೆ ಎರಡು ಡೋಸ್ ನೀಡಿರುವುದು ತಿಳಿದಿದೆ. ಲಸಿಕೆ ಹಾಕಿಸಿಕೊಳ್ಳುವಾಗ ಎರಡು ಬಾರಿ ಹಾಕಿದ್ದರೂ ಇದು ಎರಡು ಬಾರಿಯ ಡೋಸ್‌ಗಳು ಎಂದು ನನಗೆ ತಿಳಿಯಲಿಲ್ಲ. ಹೀಗೆಯೇ ಲಸಿಕೆ ಹಾಕುವುದು ಎಂದುಕೊಂಡಿದ್ದೆ. ನಂತರ ಮನೆಯವರಲ್ಲಿ ವಿಷಯ ತಿಳಿಸಿದಾಗ ಎರಡೂ ಡೋಸ್ ಒಟ್ಟಿಗೇ ಕೊಟ್ಟಿರುವುದು ತಿಳಿದಿದೆ ಎಂದು ವ್ಯಕ್ತಿ ಹೇಳಿದ್ದಾರೆ.
ಕೂಡಲೇ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗೆ ದೂರು ನೀಡಲಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ ಬೇಜವಾಬ್ದಾರಿ ಕುರಿತು ತನಿಖೆಗೆ ಆದೇಶಿಸಲಾಗಿದೆ. ಎರಡು ಡೋಸ್‌ಗಳನ್ನು ಒಟ್ಟಿಗೆ ನೀಡುವುದರಿಂದ ಅಂಥ ಯಾವುದೇ ತೊಂದರೆಯಾಗುವುದಿಲ್ಲ. ಆದರೂ ಇದು ಕರ್ತವ್ಯಲೋಪ. ಕನಿಷ್ಠ ನಾಲ್ಕು ವಾರಗಳ ಅಂತರವಿರಬೇಕು, ಕೂಡಲೇ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.