
Kiss' ಕೊಡುವುದು ಇಲ್ಲಿ ಅಪರಾಧ: ಕೊಟ್ಟಿರೋ ಮತ್ತೆ 'ಜೈಲೇ' ಗತಿ
Sunday, June 6, 2021
ದುಬೈ: ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆ ಆಯಾ ದೇಶಗಳದ್ದೇ ಆದ ಕಾನೂನು ನಿಯಮಗಳು ಇವೆ. ಹಳೆಯ ಕಾಲದ ಕೆಲವೊಂದು ಇನ್ನೂ ಹಾಗೆಯೇ ಉಳಿದುಕೊಂಡಿದ್ದರೆ. ಇನ್ನು ಕೆಲವು ಕಾನೂನುಗಳನ್ನು ಹೊಸದಾಗಿ ಜಾರಿಗೊಳಿಸಲಾಗುತ್ತಿದೆ. ಅಂಥದ್ದೇ ಒಂದು ಕಾನೂನು ಕಿಸ್ಸಿಂಗ್‌ಗೆ ಸಂಬಂಧಿಸಿದ್ದು.
ಒಬ್ಬ ಮನುಷ್ಯನಿಗೆ ಪ್ರೀತಿ ಯಾವಾಗ, ಎಲ್ಲಿ ಬೇಕಾದರೂ ಹುಟ್ಟುಬಹುದು. ಅದಕ್ಕೆ ಜಾತಿ, ನೀತಿ, ಕಟ್ಟುಪಾಡು ಇತ್ಯಾದಿ ಯಾವುದರ ಅಂಕೆಯೂ ಇಲ್ಲ. ಅದೇ ರೀತಿ ಪ್ರೇಮಿಗಳ ನಡುವೆ ಜಾಗ, ಗೊತ್ತು, ಗುರಿಯಿಲ್ಲದೇ ಯಾವಾಗ ಬೇಕಾದರೂ ಪ್ರೀತಿಯ ಮೂಡ್ ಬಂದುಬಿಡುತ್ತೆ. ಹಾಗೆಂದು ನೀವೇನಾದ್ರೂ ರಸ್ತೆ ಮೇಲೆ ಹೋಗುವಾಗ ಕಿಸ್ ಕೊಟ್ರೋ ಮುಗೀತು ಗತಿ. ಅಷ್ಟೇ ಏಕೆ ಕೈ ಕೈ ಹಿಡಿದುಕೊಂಡು ಅಸಭ್ಯವಾಗಿ ಹೋದರೂ ಅಷ್ಟೇ ಕಥೆ. ಪೊಲೀಸರು ನಿಮ್ಮಬ್ಬರನ್ನೂ ದರದರ ಎಳೆದುಕೊಂಡು ಕಂಬಿಯ ಹಿಂದೆ ಕೂಡಿ ಹಾಕ್ತಾರೆ. ಕೋರ್ಟ್ ಕೂಡ ಶಿಕ್ಷೆ ನೀಡುತ್ತದೆ. ಹೊರಗೆ ಬರುವುದು ಅಸಾಧ್ಯವೇ.
ಹಾಗೆಂದು ಸದ್ಯ ಭಾರತೀಯರು ಈ ಮಟ್ಟಿಗೆ ಹೆದರಬೇಕಾಗಿಲ್ಲ. ಇಂಥದ್ದೊಂದು ಕಾನೂನು ಇರುವುದು ದುಬೈನಲ್ಲಿ. ಅಪರಾಧಿಗಳು ಬೆಚ್ಚಿಬೀಳುವ ಭಯಾನಕ ಕಾನೂನುಗಳು ದುಬೈನಲ್ಲಿ ಇವೆ. ಕನಸಿನಲ್ಲಿಯೂ ಬೆಚ್ಚಿಬೀಳುವ ಶಿಕ್ಷೆಗಳನ್ನು ಇಲ್ಲಿ ಅಪರಾಧಿಗಳಿಗೆ ನೀಡಲಾಗುತ್ತದೆ. ಹಾಗೆಂದು ಮುತ್ತು ಕೊಡುವುದು ಏನು ಮಹಾ ಅಪರಾಧವಲ್ಲ. ಆದರೆ ಹಾಗೇನಾದ್ರೂ ಪ್ರೀತಿ ತೋರಿಸುವುದಿದ್ದರೆ ಮನೆಯಲ್ಲಿಯೇ ಇಟ್ಟುಕೊಳ್ಳಿ, ರಸ್ತೆಯ ಮೇಲೆ ಬೇಡ ಎನ್ನುತ್ತದೆ ದುಬೈ ಕಾನೂನು.
ಇಲ್ಲಿಯ ಕೆಲವೊಂದು ಪ್ರದೇಶಗಳಲ್ಲಿ ಒಳ್ಳೇ ಮೂಡ್ ಬರುವಂಥ ವಾತಾವರಣವನ್ನು ಸೃಷ್ಟಿಮಾಡಲಾಗಿದೆ. ಅಲ್ಲಿಗೆ ಜೋಡಿಗಳು ಸಾಮಾನ್ಯವಾಗಿ ಭೇಟಿ ಕೊಡುತ್ತಾರೆ. ಸದ್ಯ ಕೊರೊನಾ ಇರುವುದರಿಂದ ವಿದೇಶಕ್ಕೆ ಯಾರೂ ಹೋಗುವುದಿಲ್ಲ. ಹಾಗೊಂದು ವೇಳೆ ಭವಿಷ್ಯದಲ್ಲಿ ಹೋಗುವುದೇ ಆಗಿದ್ದರೆ ಈ ಕಾನೂನಿನ ಅರಿವು ಇದ್ದರೆ ಒಳ್ಳೆಯದು. ಗಂಡ-ಹೆಂಡತಿ ಇಲ್ಲವೇ ಪ್ರೇಮಿಗಳು ರಸ್ತೆಯ ಮೇಲೆ ಹೋಗುವಾಗ ಅಸಭ್ಯವಾಗಿ ನಡೆದುಕೊಳ್ಳುವುದು, ಕೈ ಕೈ ಹಿಡಿದು ಹೋಗುವುದು, ಮುತ್ತುಕೊಡುವುದು ಎಲ್ಲವೂ ಇಲ್ಲಿ ಅಪರಾಧವೇ. ಇದಕ್ಕೆ ಜೈಲು ಶಿಕ್ಷೆ ಕೂಡ ಇದೆ. ಈ ಕಾನೂನನ್ನು ಇಂದಿಗೂ ಇಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ ಎನ್ನುವುದು ಅಚ್ಚರಿಯ ವಿಷಯ.